ಕೊರೊನಾ ಅಬ್ಬರದ ಮಧ್ಯೆ ಕವಾಸಕಿ ರೋಗದ ಕಾಟ- ಶಿವಮೊಗ್ಗದಲ್ಲಿ ನಾಲ್ವರು ಮಕ್ಕಳು ಬಲಿ

Public TV
2 Min Read

– ಅಪೌಷ್ಠಿಕ ಮಕ್ಕಳಿಗೆ ಹೆಚ್ಚಿದ ಕೊರೊನಾ ಸಂಕಷ್ಟ

ಶಿವಮೊಗ್ಗ: ಕೊರೊನಾ ಸೋಂಕು ಆಯ್ತು. ಬ್ಲ್ಯಾಕ್ ಫಂಗಸ್(Black Fungus), ಯೆಲ್ಲೋ ಫಂಗಸ್(Yellow Fungus) ಆಯ್ತು. ಇದೀಗ ಮಕ್ಕಳಲ್ಲಿ ಕವಾಸಕಿ ರೋಗ (Kawasaki Disease) ಕಾಣಿಸಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕವಾಸಕಿ ರೋಗಕ್ಕೆ ನಾಲ್ವರು ಮಕ್ಕಳು ಬಲಿಯಾಗಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.

ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ, ಅಪೌಷ್ಠಿಕತೆ ಸಮಸ್ಯೆ ಇರುವ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದೆ. ರಾಜ್ಯದ ಎಲ್ಲೆಡೆ ಕವಾಸಕಿ ರೋಗ ಭೀತಿ ಉಲ್ಬಣಿಸಿದ್ದು, ಈ ಕವಾಸಕಿ ರೋಗಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಕಳೆದ 15 ದಿನದಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ 8 ಮಕ್ಕಳಲ್ಲಿ ರೋಗ ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ವ್ಯಾಕ್ಸಿನ್ ಮೇಲೆ ನಂಬಿಕೆ ಇಲ್ಲ ಎಂದಿದ್ದ ಅಖಿಲೇಶ್ ಯಾದವ್ ತಂದೆಯೇ ಲಸಿಕೆ ಪಡೆದ್ರು

ವೈದ್ಯರು ಹೇಳುವ ಪ್ರಕಾರ ಈ ಕವಾಸಕಿ ರೋಗ ಹಳೆಯ ರೋಗ. ಆದರೆ ಈ ಹಿಂದೆ ತಿಂಗಳಲ್ಲಿ ಒಂದು ಮಗುವಿಗೆ ಈ ಕವಾಸಕಿ ರೋಗ ಕಾಣಿಸಿಕೊಳ್ಳುತಿತ್ತು. ಆದರೆ ಇದೀಗ ನಮ್ಮ ಆಸ್ಪತ್ರೆಗೆ ಪ್ರತಿದಿನ ಒಂದು ಮಗು ಕವಾಸಕಿ ರೋಗಕ್ಕೆ (Multisystem inflammatory syndrome in children (MIS-C)) ಚಿಕಿತ್ಸೆ ಪಡೆಯಲು ದಾಖಲಾಗುತ್ತಿದೆ. ಬೇರೆ ಬೇರೆ ಆರೋಗ್ಯ ಸಮಸ್ಯೆ ಹೊಂದಿರುವ 8 ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಾಲ್ಕೈದು ವಾರಗಳ ಬಳಿಕ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದು ಹಳೆಯ ರೋಗ ಆದರೂ ಕೊರೋನಾ ಸೋಂಕು ಹೆಚ್ಚಿರುವ ಸಮಯದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಕವಾಸಕಿ ರೋಗಕ್ಕೆ ಇಂಜೆಕ್ಷನ್ ಇದ್ದು, ಈ ಇಂಜೆಕ್ಷನ್ ಬೆಲೆ ದುಬಾರಿ ಆಗಿರುವ ಕಾರಣ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಲಭ್ಯತೆ ಇಲ್ಲದಿರುವ ಕಾರಣ ಪೋಷಕರಲ್ಲಿ ಸಹಜವಾಗಿ ಆತಂಕ ಉಂಟು ಮಾಡಿದೆ ಎಂದು ಮಕ್ಕಳ ತಜ್ಞ ಡಾ.ಧನಂಜಯ್ ಸರ್ಜಿ ಹೇಳುತ್ತಾರೆ.

ಜಿಲ್ಲೆಯಲ್ಲಿ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಕವಾಸಕಿ ರೋಗಕ್ಕೆ 4 ಮಕ್ಕಳು ಬಲಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮಕ್ಕಳು ಇರುವ ಮನೆಯಲ್ಲಿ ಪೋಷಕರಿಗೆ ಕೊರೊನಾ ಸೋಂಕು ತಗುಲಿದ್ದರೆ, ಅಂತಹ ಮಕ್ಕಳನ್ನು ಜಾಗೃತಿಯಿಂದ ನೋಡಿಕೊಳ್ಳಬೇಕು. ಮೂರು ದಿನಕ್ಕಿಂತ ಹೆಚ್ಚು ದಿವಸ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡರೆ ತಕ್ಷಣವೇ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಸಿಮ್ಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ವಿಶೇಷವಾಗಿ ಐಸಿಯು ವಾರ್ಡ್ ಆರಂಭಿಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ. ತಾಲೂಕು ಹಂತದಲ್ಲಿ ಸಹ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕಿದೆ. ಕೊರೊನಾ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಮಕ್ಕಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕಿದೆ. ರೋಗ ಕಾಣಿಸಿಕೊಂಡ ಅಂತಿಮ ಹಂತದವರೆಗೆ ಕಾಯದೇ ರೋಗ ಪತ್ತೆಯಾದ ಆರಂಭದಲ್ಲಿಯೇ ವೈದ್ಯರ ಭೇಟಿಯಾಗಿ ಚಿಕಿತ್ಸೆ ಕೊಡಿಸಿದರೇ ಮಕ್ಕಳನ್ನು ಅಪಾಯದಿಂದ ಕಾಪಾಡಿಕೊಳ್ಳಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *