ಕೊರೊನಾ ಅಪಾಯಕಾರಿ ರಾಜ್ಯಗಳಿಂದ ಬಂದವರಿಗೆ ಸ್ವಂತ ಖರ್ಚಿನಲ್ಲೇ ಕೋವಿಡ್ ಟೆಸ್ಟ್

Public TV
2 Min Read

ಬೆಂಗಳೂರು: ಕೊರೊನಾ ಅಪಾಯಕಾರಿ ರಾಜ್ಯದಿಂದ ವಿಮಾನ, ರೈಲಿನಲ್ಲಿ ಬಂದವರಿಗೆ ಇನ್ನುಮುಂದೆ ಸ್ವಂತ ಖರ್ಚಿನಲ್ಲಿ ಕೋವಿಡ್-19 ಟೆಸ್ಟ್‍ಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದುವರೆಗೂ ಸರ್ಕಾರದ ವತಿಯಿಂದ ಗಂಟಲು ದ್ರವ ಸಂಗ್ರಹಿಸಿ ಉಚಿತ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿಯೊಬ್ಬರು ಪರೀಕ್ಷೆಗೆ 650 ರೂಪಾಯಿ ನೀಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಒಂದೇ ದಿನ ಅತೀ ಹೆಚ್ಚು 248 ಮಂದಿಗೆ ಕೊರೊನಾ- 2,781ಕ್ಕೆ ಏರಿದ ಸೋಂಕಿತರ ಸಂಖ್ಯೆ

ಪ್ರಕಟಣೆಯಲ್ಲಿ ಏನಿದೆ?:
ಕೋವಿಡ್-19 ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಗೊಳಿಸುವ ವಿಷಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಮತ್ತು ಉಳಿದ ಎಲ್ಲಾ ಜಿಲ್ಲೆಗಳ ಸಾಮರ್ಥ್ಯದಲ್ಲಿ ಪರಿಮಿತಿ ಇರುತ್ತದೆ. ಕೋವಿಡ್-19ರ ಸಂಕಷ್ಟದಲ್ಲಿರುವ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರೆಲ್ಲರನ್ನು ಹೋಟೆಲ್/ವಸತಿ ಗೃಹಗಳಲ್ಲಿ 7 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ಕಾರಣವೇನೆಂದರೆ ಹೋಟೆಲ್/ ವಸತಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನೇಕ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಿರುತ್ತಾರೆ.

ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಒಳಪಡುವ ಕೆಲವು ವಿಶಿಷ್ಟ ಗುಂಪಿನ ಪ್ರಯಾಣಿಕರ ಗಂಟಲು ದ್ರವವನ್ನು ಮಾತ್ರ ಲ್ಯಾಬ್ ಪರೀಕ್ಷೆ ಮಾಡುವ ನಿರ್ಣಯವನ್ನು ರಾಜ್ಯ ಕೈಗೊಂಡಿದೆ. ಈ ಮೂಲಕ ಕೋವಿಡ್ ಶಂಕಿತರನ್ನು ಶೀಘ್ರಗತಿಯಲ್ಲಿ ಪರೀಕ್ಷೆ ಮಾಡಲು ಖಾಸಗಿ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ.

ಇತ್ತೀಚೆಗೆ ಅವರೊಂದಿಗೆ ನಡೆಸಿದ ವಿಮಾನ ಮತ್ತು ರೈಲುಗಳ ಮುಖಾಂತರ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಗಂಟಲು ಮಾದರಿಗಳನ್ನು ಸಂಗ್ರಹಿಸಿ ಪ್ರಸಕ್ತ ರಾಜ್ಯ ಸರ್ಕಾರದ ಪರೀಕ್ಷಾ ನಿಯಮದಂತೆ ಕೋವಿಡ್-19 ಆರ್‌ಟಿ- ಪಿಸಿಆರ್ ಪರೀಕ್ಷೆ ನಡೆಸಿ 24 ಗಂಟೆಯ ಒಳಗಾಗಿ ಫಲಿತಾಂಶ ನೀಡುವ ಸಾಮರ್ಥ್ಯ ಮತ್ತು ಸನ್ನದ್ದತೆ ಕುರಿತು ಖಾಸಗಿ ಪ್ರಯೋಗಾಲಗಳೊಂದಿಗೆ ಚರ್ಚೆ ನಡೆಸಲಾಗಿರುತ್ತದೆ. ಪ್ರಯೋಗಾಲಯ ಪರೀಕ್ಷೆಗಳ ಕುರಿತು ಆರೋಗ್ಯ ಇಲಾಖೆಯ ಪ್ರಸ್ತಾವನೆಯನ್ನು ಸದರಿ ಖಾಸಗಿ ಲ್ಯಾಬ್‍ಗಳಿಗೆ ಒಪ್ಪಿರುತ್ತಾರೆ.

ಗಂಟಲು, ರಕ್ತದ ಮಾದರಿಗಳನ್ನು ಪೊಲಿಂಗ್ ವಿಧಾನದಲ್ಲಿ ಪರೀಕ್ಷಿಸಲು (ಐಸಿಎಂಆರ್ ಮಾರ್ಗಸೂಚಿಯಂತೆ 1 ಪೊಲ್‍ನಲ್ಲಿ 5 ಮಾದರಿಗಳು ಇರತಕ್ಕದ್ದು) ಪರೀಕ್ಷೆ ಶುಲ್ಕವಾಗಿ ಪ್ರತಿ ಯಾತ್ರಿಕರಿಂದ, ಫಲಿತಾಂಶ ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಇರಲಿತಲಾ 650 ರೂ. ನಂತೆ ಶುಲ್ಕವನ್ನು ಖಾಸಗಿ ಲ್ಯಾಬ್‍ಗಳು ಪಡೆಯತಕ್ಕದ್ದು.

Share This Article
Leave a Comment

Leave a Reply

Your email address will not be published. Required fields are marked *