ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಶಿವಾಜಿರಾವ್ ಪಾಟೀಲ್ ನೀಲಂಗೆಕರ್ (91) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಶಿವಾಜಿರಾವ್ ಪಾಟೀಲ್ ಅವರು ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಪಾಟೀಲ್ ಅವರು ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ತೊಂದರೆಗಳಿಂದಾಗಿ ನಿಧನರಾಗಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಶಿವಾಜಿರಾವ್ ಪಾಟೀಲ್ ಕಳೆದ ತಿಂಗಳು ಕೊರೊನಾ ಟೆಸ್ಟ್ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿತ್ತು. ನಂತರ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅಂದರೆ ನಾಲ್ಕು ದಿನಗಳ ಹಿಂದೆ ಮತ್ತೆ ಟೆಸ್ಟ್ ಮಾಡಿದಾಗ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಕೊರೊನಾ ವೈರಸ್ ಪತ್ತೆಯಾದ ನಂತರ ಕಾಂಗ್ರೆಸ್ ಮುಖಂಡರು ಲಾತೂರ್ ಜಿಲ್ಲೆಯ ನೀಲಂಗದಲ್ಲಿರುವ ತಮ್ಮ ನಿವಾಸದಿಂದ ಪುಣೆಗೆ ಹೋಗಿದ್ದರು.
ಲಾತೂರ್‌ನ ಪ್ರಬಲ ನಾಯಕರಾದ ಪಾಟೀಲ್ ನೀಲಂಗೆಕರ್ ಅವರು 1985 ರಿಂದ 1986 ರ ಮಾರ್ಚ್ ವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಇದಕ್ಕೂ ಮೊದಲು ನೀಲಂಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1985 ರಲ್ಲಿ ಎಂಡಿ ಪರೀಕ್ಷೆಯ ಫಲಿತಾಂಶದಲ್ಲಿ ವಂಚನೆ ಆರೋಪದ ಮೇಲೆ ಬಾಂಬೆ ಹೈಕೋರ್ಟ್ ಪಾಟೀಲ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.