ಕೊರೊನಾಗೆ ಮೃತಪಟ್ಟವರ ಗೌರವಯುತ ಸಂಸ್ಕಾರಕ್ಕೆ ಮುಂದಾಗಿರೋ ಸ್ವಯಂ ಸೇವಕರು!

Public TV
2 Min Read

ಮಡಿಕೇರಿ: ಕೊರೊನಾ ಮಹಾಮಾರಿಗೆ ಮೃತಪಟ್ಟರೆಂದರೆ ಮುಗಿಯಿತು. ಅಂತ ಸಾವನ್ನು ಅತ್ಯಂತ ಕೀಳಾಗಿ ನೋಡಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ಸಂದರ್ಭ ನಡೆದುಕೊಂಡ ರೀತಿ ಅದನ್ನು ಸಾಬೀತು ಪಡಿಸಿವೆ. ಹೀಗಾಗಿ ಎಂತಹದ್ದೇ ಸಾವಿಗೂ ಗೌರವಯುವಾದ ಅಂತ್ಯ ಸಂಸ್ಕಾರವನ್ನು ಮಾಡಬೇಕೆಂಬ ದೃಷ್ಟಿಯಿಂದ ಕೊಡಗಿನ ಸ್ವಯಂ ಸೇವಕರ ತಂಡಗಳು ಸಿದ್ಧವಾಗಿವೆ.

ಕೊರೊನಾ ಡೆಡ್ಲಿ ವೈರಸ್ ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೂರು ಧರ್ಮಗಳ ಸ್ವಯಂ ಸೇವಕರ ತಂಡಗಳು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಮುಂದೆ ಬಂದಿವೆ. ಎಸ್‍ಡಿಪಿಐನ 30 ಯುವಕರ ತಂಡ ಜಿಲ್ಲಾಡಳಿತದಿಂದ ಈಗಾಗಲೇ ತರಬೇತಿ ಪಡೆದಿದೆ. ಹೀಗೆ ತರಬೇತಿ ಪಡೆದಿರುವ ಎಸ್‍ಡಿಪಿಐನ ಸ್ವಯಂ ಸೇವಕರ ತಂಡ ಭಾನುವಾರಷ್ಟೇ ಮೃತಪಟ್ಟ ಕುಶಾಲನಗರದ 58 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಿದೆ. ಸರ್ಕಾರದ ಮಾರ್ಗ ಸೂಚಿಯನ್ವಯ ಎಲ್ಲವನ್ನೂ ಅನುಸರಿಸಿರುವ ಸ್ವಯಂ ಸೇವಕರ ತಂಡ ಪಿಪಿಇ ಕಿಟ್ ಗಳನ್ನು ಧರಿಸಿ ಸಂಪ್ರದಾಯದಂತೆ ಶವಸಂಸ್ಕಾರ ಮಾಡಿದೆ.

ಮಡಿಕೇರಿಯ ಎಲ್ಲಾ ಜಮಾತ್‍ಗಳು ಇದಕ್ಕಾಗಿ ಮಡಿಕೇರಿಯ ರಾಣಿಪೇಟೆಯಲ್ಲಿರುವ ಖಬರಸ್ಥಾನದಲ್ಲಿ ಒಂದು ಎಕರೆಯಷ್ಟು ಜಾಗವನ್ನು ಕೋವಿಡ್ 19 ವೈರಸ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೇ ಬಿಟ್ಟುಕೊಟ್ಟಿವೆ.

ವಿಶ್ವ ಹಿಂದೂ ಪರಿಷತ್, ಭಜರಂಗದಳದ 45 ಯುವಕರ ತಂಡವೂ ಕೋವಿಡ್ 19 ನಿಂದ ಮೃತಪಟ್ಟರೆ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ಮಾಡಲು ಸಿದ್ಧವಾಗಿದೆ. ನಮಗೂ ತರಬೇತಿ ನೀಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಇನ್ನು ಸೇವಾ ಭಾರತಿಯಿಂದಲೂ ಸ್ವಯಂ ಸೇವಕರ ತಂಡವು ಕೊರೊನಾಕ್ಕೆ ಬಲಿಯಾಗುವವರ ಶವಸಂಸ್ಕಾರ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಸಮುದಾಯದ ಸ್ವಯಂ ಸೇವಕರು ಕೂಡ ತಮ್ಮ ಸಂಪ್ರದಾಯದಂತೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುತ್ತೇವೆ. ಹೀಗಾಗಿ ನಮಗೂ ತರಬೇತಿ ಬೇಕು ಎಂದಿದ್ದಾರೆ.

ಜಿಲ್ಲಾಡಳಿತ ಕೂಡ ತರಬೇತಿ ನೀಡುತ್ತಿದ್ದು, ಸಂಸ್ಕಾರ ಮಾಡಲು ಸಿಬ್ಬಂದಿ ಕೊರತೆ ಇಲ್ಲ. ಆದರೆ ಸಮುದಾಯದವರು ಮುಂದೆ ಬಂದಾಗ ಸಂಸ್ಕಾರಕ್ಕೊಂದು ಅರ್ಥ ಸಿಗುತ್ತದೆ. ಹೀಗಾಗಿ ತರಬೇತಿ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳಲ್ಲೂ ಶವ ಸಂಸ್ಕಾರಕ್ಕೆ ಜಾಗ ಮೀಸಲಿರಿಸಲಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *