ಬೆಂಗಳೂರು: ಚಿತ್ರದುರ್ಗದ ಪಬ್ಲಿಕ್ ಟಿವಿ ಕ್ಯಾಮರಾಮೆನ್ ಬಸವರಾಜ ಕೋಟಿ ಕಳೆದ ತಿಂಗಳು ಕೊರೊನಾದಿಂದ ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಆಡಳಿತ ಮಂಡಳಿಯು 10 ಲಕ್ಷ ರೂಪಾಯಿ ಧನ ಸಹಾಯ ಘೋಷಿಸಿತ್ತು. ಅದರಂತೆ ಇಂದು ಚಿತ್ರದುರ್ಗದ ಮೃತರ ಮನೆಗೆ ತೆರಳಿ ಅವರ ಪತ್ನಿಗೆ 10 ಲಕ್ಷ ರೂಪಾಯಿ ಮೊತ್ತದ ಚೆಕ್ ಹಸ್ತಾಂತರಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರ ಸೂಚನೆಯ ಮೇರೆಗೆ ಪಬ್ಲಿಕ್ ಟಿವಿ ಸಿಇಒ ಅರುಣ್ ಕುಮಾರ್, ಸಿಒಒ ಸಿಕೆ ಹರೀಶ್ ಕುಮಾರ್ ಹಾಗೂ ಕಾರ್ಯಕಾರಿ ಸಂಪಾದಕ ದಿವಾಕರ್.., ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ನೆರವಿನ ಚೆಕ್ ಹಸ್ತಾಂತರಿಸಿದ್ದಾರೆ.
ಇನ್ನು ಪಬ್ಲಿಕ್ ಟಿವಿ ಸಿಬ್ಬಂದಿ ಸಹ ಸಹಾಯ ಹಸ್ತ ಚಾಚಿದ್ದಾರೆ. ಮೃತ ಬಸವರಾಜ ಕೋಟಿ ಅವರ ಹೆತ್ತವರಿಗೂ ಅನುಕೂಲವಾಗಲೆಂದು ತಮ್ಮ ವೇತನದ ಸಣ್ಣ ಪಾಲನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಧಾರವಾಡದ ಅವರ ನಿವಾಸಕ್ಕೆ ತೆರಳಿ ಪೋಷಕರಿಗೆ 2 ಲಕ್ಷ ರೂಪಾಯಿ ಚೆಕ್ ವಿತರಿಸಲಾಗಿದೆ.
ಪಬ್ಲಿಕ್ ಟಿವಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಕ್ಯಾಮರಾಮೆನ್ ಆಗಿ ಕಳೆದ ಐದು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಬಸವರಾಜ್ , ಮೇ 12ರಂದು ಕೊರೊನಾಗೆ ಬಲಿಯಾಗಿದ್ದರು. ಪರಿಹಾರ ಮೊತ್ತದ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗುತ್ತದೆ ಎಂಬ ಭಾವನೆಯೊಂದಿಗೆ ಆ ನೊಂದ ಕುಟುಂಬದ ಶ್ರೇಯೋಭಿವೃದ್ಧಿಗೆ ಸಮಸ್ತ ಪಬ್ಲಿಕ್ ಬಳಗ ಪ್ರಾರ್ಥಿಸುತ್ತದೆ.