ಕೊಯ್ನಾ ಜಲಾನಯನ ಪ್ರದೇಶದಲ್ಲಿ ಭೂಕಂಪನ- ಕೃಷ್ಣಾ ನದಿ ತೀರದಲ್ಲಿ ಆತಂಕ

Public TV
1 Min Read

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯ್ನಾ ಜಲಾಶಯದ ಪರಿಸರದಲ್ಲಿ ಇಂದು ಮುಂಜಾನೆ 10.22 ಕ್ಕೆ ಭೂ ಕಂಪನವಾಗಿದ್ದು, ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆಯು 2.9 ರಷ್ಟು ದಾಖಲಾಗಿದೆ.

ಭೂ ಕಂಪನದ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುವ ಬಿಡುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಮಳೆಯ ಪ್ರಮಾಣವು ಕೊಯ್ನಾ-136 ಮಿ.ಮೀ , ನವಜಾ-82 ಮಿ.ಮೀ, ಮಹಾಬಳೇಶ್ವರ-156ಮಿ.ಮೀ, ವಾರಣಾ-140ಮಿ.ಮೀ, ಕಾಳಮ್ಮವಾಡಿ-75ಮಿ.ಮೀ ಮತ್ತು ರಾಧಾನಗರಿಯಲ್ಲಿ -58ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ಪಶ್ಚಿಮ ಘಟಗಳಲ್ಲಿ ಸತತ ಮಳೆಯಿಂದಾಗಿ ಕೊಯ್ನಾ ಜಲಾಶಯವು ಈಗಾಗಲೆ 86 ಟಿಎಂಸಿ ಭರ್ತಿಯಾಗಿದೆ. 105 ಟಿಎಂಸಿ ಸಾಮರ್ಥ್ಯ ಇರುವ ಕೊಯ್ನಾ ಜಲಾಶಯ ಇದಾಗಿದ್ದು, ಕೊಯ್ನಾ ಜಲಾಶಯದಲ್ಲಿ ಭೂ ಕಂಪನವಾದ ಹಿನ್ನೆಲೆ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದ್ದು ಇದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಕೃಷ್ಣ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.

ಸದ್ಯ ಕೃಷ್ಣಾ ನದಿಗೆ 96 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಿಂದ ಇಂದು ಬಿಟ್ಟಿರುವ ನೀರು ಕರ್ನಾಟಕ ರಾಜ್ಯದ ಕೃಷ್ಣಾ ನದಿಗೆ ಮೂರ್ನಾಲ್ಕು ದಿನಗಳ ಬಳಿಕ ಸೇರಿಕೊಳ್ಳಲಿದೆ. ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಂದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *