ಕೊಪ್ಪಳ ಗವಿಮಠ ಜಾತ್ರೆಗೆ ಕೊರೊನಾ ಅಡ್ಡಿ

Public TV
1 Min Read

ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಪ್ರಖ್ಯಾತಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆ ನಡೆಯುತ್ತಾ? ಇಲ್ಲವಾ? ಅನ್ನೋ ಅನುಮಾನ ಭಕ್ತರಲ್ಲಿ ಮೂಡಿದೆ. ಸದ್ಯ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಪ್ರತಿ ವರ್ಷ ಈ ಜಾತ್ರೆಯಲ್ಲಿ ಸುಮಾರು ಐದು ಲಕ್ಷಕ್ಕೂ ಅಧಿಕ ಜನ ಸೇರುತ್ತಾರೆ.

ಲಕ್ಷಾಂತರ ಜನರು ಸೇರುವ ಜಾತ್ರೆಗೆ ನಾವು ಅನುಮತಿ ನೀಡಲ್ಲ. ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿಯಮಗಳ ಪ್ರಕಾರ ಜಾತ್ರೆಗೆ ಅನುಮತಿ ಕೊಡಲು ಸಾಧ್ಯವಿಲ್ಲ. ಜಿಲ್ಲೆಯ ಯಾವುದೇ ಜಾತ್ರೆಗೆ ಅನುಮತಿ ನೀಡಿಲ್ಲ, ಗವಿಸಿದ್ದೇಶ್ವರ ಜಾತ್ರೆಗೂ ಅನುಮತಿ ನೀಡಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲಾಗಿದೆ. ಮತ್ತೆ ಲಕ್ಷಾಂತರ ಜನರು ಒಂದೆಡೆ ಸೇರುವದರಿಂದ ಸೋಂಕು ಉಲ್ಬಣ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸೂರಳ್ಕರ್ ಸ್ಪಷ್ಟಪಡಿಸಿದ್ದಾರೆ.

15 ದಿನಗಳ ಕಾಲ ಜರುಗುವ ಜಾತ್ರೆಗೆ ಎರಡು ತಿಂಗಳ ಮುಂಚೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಜಾತ್ರೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಜಾತ್ರೆಗೆ ಅನುಮತಿ ಕೋರಲಾಗಿದೆ. ಜಾತ್ರೆಗೆ ಅನುಮತಿ ನೀಡದೆ ಇರುವುದರಿಂದ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಮತ್ತು ಜಿಲ್ಲಾಧಿಕಾರಿ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ. ಸ್ವಾಮೀಜಿ ಅವರು ಜನವರಿ ಎರಡನೇ ವಾರದಂದು ಜಾತ್ರೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಕೊರೊನಾ ಕರಿನೆರಳು ಮಹಾಕುಂಭಮೇಳ ಎಂದೇ ಪ್ರಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರೆಗೂ ಆವರಿಸಿದ್ದು ಜಾತ್ರೆ ನಡೆಯುತ್ತೋ ಇಲ್ವೋ ಎಂಬ ಅನುಮಾನ ಭಕ್ತರಲ್ಲಿ ಮೂಡಿದೆ. ಜಾತ್ರೆಯ ಸ್ಪಷ್ಟ ನಿರ್ಧಾರ ಜನವರಿ 15ರ ಬಳಿಕ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *