ಕೊನೆಯ 17 ಬಾಲಿಗೆ 7 ರನ್ 5 ವಿಕೆಟ್ – ಪಂಜಾಬ್ ಸೂಪರ್ ಬೌಲಿಂಗ್‍ಗೆ ಹೈದರಾಬಾದ್ ಆಲೌಟ್

Public TV
3 Min Read

– ಬದಲಿ ಆಟಗಾರ ಸುಚಿತ್ ಕ್ಯಾಚ್‍ನಿಂದ ಪಂದ್ಯಕ್ಕೆ ಟ್ವಿಸ್ಟ್
– ರಾಹುಲ್ ಪಡೆಯ ಪ್ಲೇ ಆಫ್ ಕನಸು ಜೀವಂತ
– ಪ್ಲೇ ಆಫ್ ರೈಸಿನಿಂದ ಹೈದ್ರಾಬಾದ್ ಔಟ್

ದುಬೈ: ಇಂದು ನಡೆದ ಸೂಪರ್ ಶನಿವಾರದ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಭರ್ಜರಿ ಬೌಲಿಂಗ್ ಮಾಡಿ ವಿನ್ ಆಗಿದೆ. 12 ರನ್‍ಗಳ ಭರ್ಜರಿ ಗೆಲುವಿನಿಂದ ಅಂಕಪಟ್ಟಿಯಲ್ಲಿ 10 ಅಂಕ ಪಡೆದು ಐದನೇ ಸ್ಥಾನದಲ್ಲಿದೆ.

ಇಂದು ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 43ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಡಿದ ಪಂಜಾಬ್ ತಂಡ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 126 ರನ್ ಸಿಡಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ ಕೊನೆಯಲ್ಲಿ ಪಂಜಾಬ್ ಬೌಲರ್ ಗಳು ಮಾಡಿದ ಮ್ಯಾಜಿಕ್‍ನಿಂದ ಆಲೌಟ್ ಆಗಿ, ಪ್ಲೇ ಆಫ್ ರೇಸಿನಿಂದ ಹೊರಬಿದ್ದಿದೆ.

ಪಂದ್ಯಕ್ಕೆ ಟ್ವಿಸ್ಟ್
16ನೇ ಓವರ್ ಮುಕ್ತಾಯಕ್ಕೆ 99 ರನ್ ಹೊಡೆದು ಮೂರು ವಿಕೆಟ್ ಕಳೆದುಕೊಂಡು ಹೈದರಾಬಾದ್ ಗೆಲುವಿನ ಹಾದಿಯಲ್ಲಿತ್ತು. ಆದರೆ 16ನೇ ಓವರ್ 1ನೇ ಬಾಲಿನಲ್ಲಿ 15 ರನ್ ಗಳಿಸಿದ್ದ ಪಾಂಡೆ ಬದಲಿ ಆಟಗಾರ ಸುಚಿತ್ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ಇಲ್ಲಿಂದ ಪಂದ್ಯ ಪಂಜಾಬ್ ಕಡೆ ವಾಲಿತು. ನಂತರ ಕೊನೆಯ 17 ಬಾಲಿಗೆ ಪಂಜಾಬ್ ತಂಡ ಐದು ವಿಕೆಟ್ ಕಿತ್ತು ಕೇವಲ 7 ರನ್ ನೀಡಿ ಪಂದ್ಯವನ್ನು ಗೆದ್ದು, ಪ್ಲೇ ಆಫ್ ಹಾದಿಯನ್ನು ಸುಗಮವಾಗಿಸಿಕೊಂಡರು.

ಪಂಜಾಬ್ ಸೂಪರ್ ಬೌಲಿಂಗ್
ಇಂದಿನ ಪಂದ್ಯದಲ್ಲಿ ಆರಂಭದಲ್ಲಿ ಎಡವಿದ ಪಂಜಾಬ್ ಬೌಲರ್ ಗಳು ಮಧ್ಯದಲ್ಲಿ ಫಿನಿಕ್ಸ್ ನಂತೆ ಮೇಲೆದ್ದು ಬಂದರು. 3.5 ಓವರ್ ಬೌಲ್ ಮಾಡಿದ ಅರ್ಷ್‍ದೀಪ್ ಸಿಂಗ್ ಮೂರು ವಿಕೆಟ್ ಕಿತ್ತು ಕೇವಲ 23 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕ್ರಿಸ್ ಜೋರ್ಡಾನ್ ಅವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು. ಕೇವಲ 17 ರನ್ ನೀಡಿದರು. ಉಳಿದಂತೆ ಮೊಹಮ್ಮದ್ ಶಮಿ, ರವಿ ಬಿಷ್ಣೋಯ್ ಮತ್ತು ಮುರುಗನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಪಂಜಾಬ್ ನೀಡಿದ 126ರನ್‍ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್, ಜಾನಿ ಬೈರ್‍ಸ್ಟೋವ್ ಅವರು ಪವರ್ ಪ್ಲೇನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು. ಈ ಮೂಲಕ ಆರು ಓವರ್ ಮುಕ್ತಾಯದ ವೇಳಗೆ ಸನ್‍ರೈಸರ್ಸ್ ಹೈದರಾಬಾದ್ ತಂಡ ಒಂದು ವಿಕೆಟ್ ಕಳೆದುಕೊಳ್ಳದೇ 52 ರನ್ ಪೇರಿಸಿತು.

ಆದರೆ ಪವರ್ ಪ್ಲೇ ಮುಗಿದ ನಂತರದ ಎರಡನೇ ಬಾಲಿನಲ್ಲಿ 20 ಬಾಲಿಗೆ 35 ರನ್ ಸಿಡಿಸಿದ್ದ ನಾಯಕ ಡೇವಿಡ್ ವಾರ್ನರ್ ಅವರು ಔಟ್ ಆದರು. ನಂತರ ಏಳನೇ ಓವರಿನಲ್ಲಿ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ಗೆ 20 ಬಾಲಿಗೆ 19 ರನ್ ಸಿಡಿಸಿ ಆಡುತ್ತಿದ್ದ ಜಾನಿ ಬೈರ್‍ಸ್ಟೋವ್ ಅವರು ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಇದಾದ ನಂತರ ಬಂದ ಅಬ್ದುಲ್ ಸಮದ್ ಅವರು ಏಳು ರನ್ ಗಳಸಿ ಮೊಹಮ್ಮದ್ ಶಮಿ ಅವರ ಬೌಲಿಂಗ್‍ನಲ್ಲಿ ಔಟ್ ಆದರು.

ನಂತರ ಮನೀಶ್ ಪಾಂಡೆ ಮತ್ತು ವಿಜಯ್ ಶಂಕರ್ ಸೇರಿಕೊಂಡು ಉತ್ತಮ ಜೊತೆಯಾಟವಾಡಿದರು. ಆದರೆ 16ನೇ ಓವರ್ ಮೊದಲ ಬಾಲಿನಲ್ಲಿ 15 ರನ್ ಗಳಿಸಿದ್ದ ಪಾಂಡೆ ಬದಲಿ ಆಟಗಾರ ಸುಚಿತ್ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ನಂತರ ವಿಜಯ್ ಶಂಕರ್ ಅವರು ಅರ್ಷ್‍ದೀಪ್ ಸಿಂಗ್ ಅವರು ಮಾಡಿದ ಬೌಲಿಂಗ್ ಮೋಡಿಗೆ ಬಲಿಯಾಗಿ ಕೆಎಲ್ ರಾಹುಲ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ 19ನೇ ಓವರಿನಲ್ಲಿ ಜೇಸನ್ ಹೋಲ್ಡರ್ ಅವರು ಕ್ಯಾಚ್ ಕೊಟ್ಟರು.

ಜೇಸನ್ ಹೋಲ್ಡರ್ ಔಟ್ ಆದ ನಂತರ ಬಂದ ರಶೀದ್ ಖಾನ್ ಅವರು ಔಟ್ ಆಗಿ ಹೊರನಡೆದರು. ನಂತರ ಬಂದ ಯಾವುದೇ ಹೈದರಾಬಾದ್ ಬ್ಯಾಟ್ಸ್ ಮ್ಯಾನ್‍ಗಳು ಕ್ರೀಸಿನಲ್ಲಿ ನಿಲ್ಲಲಿಲ್ಲ. ಹೀಗಾಗಿ ಇನ್ನು ಒಂದು ಬಾಲ್ ಇರುವಾಗಲೇ ಹೈದರಾಬಾದ್ ಆಲೌಟ್ ಆಯ್ತು.

ಇದಕ್ಕೂ ಮೊದಲ ಬ್ಯಾಟ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್‍ರೈಸರ್ಸ್ ಹೈದರಾಬಾದ್ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಗಿತ್ತು. ಕೊನೆಯ ಬಾಲಿನವರೆಗೂ ಸ್ಫೋಟಕ ಬ್ಯಾಟ್ಸ್ ಮ್ಯಾನ್ ನಿಕೋಲಸ್ ಪೂರನ್ ಕ್ರೀಸಿನಲ್ಲಿ ಇದ್ದರು, ರನ್ ಗಳಿಸುವಲ್ಲಿ ವಿಫಲವಾಯದರು. ಈ ಮೂಲಕ 20 ಓವರಿನಲ್ಲಿ ಏಳು ವಿಕೆಟ್ ಕಳೆದುಕೊಂಡು ಕೇವಲ 126 ರನ್ ಗಳಸಿತ್ತು.

Share This Article
Leave a Comment

Leave a Reply

Your email address will not be published. Required fields are marked *