ಕೊನೆಗೂ ಸಚಿವರಾಗಿ 7 ಮಂದಿ ಪ್ರಮಾಣ ವಚನ

Public TV
1 Min Read

ಬೆಂಗಳೂರು: ಕೊನೆಗೂ ಬಿಜೆಪಿಯ ನೂತನ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇಂದು 7 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಅವರಿಗೆ ರಾಜ್ಯಪಾಲ ವಜುಭಾಯ್ ವಾಲಾ ಪ್ರಮಾಣವಚನ ಬೋಧಿಸಿದರು.

ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜಭವನಕ್ಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಅಲ್ಲದೆ ಸಚಿವರ ಆಪ್ತರಿಗೂ ಒಳಗಡೆ ಪ್ರವೇಶ ನಿರಾಕರಿಸಲಾಗಿತ್ತು. ಒಟ್ಟಾರೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಯೂಟ್ಯೂಬ್ ಲಿಂಕ್ ಮೂಲಕ ಸಮಾರಂಭ ನೋಡಲು ಅವಕಾಶ ಕಲ್ಪಿಸಲಾಗಿತ್ತು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುತಿನ ಚೀಟಿ ರೆಡ್ ಪಾಸ್, ಬ್ಲ್ಯೂ ಪಾಸ್ ಇದ್ದರೆ ಮಾತ್ರ ರಾಜಭವನದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ರಾಜಭವನದ ಹೊರಗೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿತ್ತು. ಹೊರಗೆ ಜನ ಸೇರದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಕೆಲ ದಿನಗಳಿಂದ ತಾವೂ ಸಚಿವರಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಇಂದು ನಿರಾಸೆಯಾಗಿದೆ. ಮುನಿರತ್ನ, ಸುನಿಲ್ ಕುಮಾರ್ ಮೊದಲಾದವರ ಹೆಸರು ಸಚಿವರ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಆದರೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 7 ಜನರ ಹೆಸರನ್ನು ಸಿಎಂ ಬಹಿರಂಗಪಡಿಸಿದ್ದರು. ಈ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿತು. ಅಸಮಾಧಾನಿತರು ಸಿಎಂ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಇತ್ತ ಸಚಿವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಮುನಿರತ್ನ ಹೆಸರನ್ನು ಕೂಡ ಕೈ ಬಿಡಲಾಗಿದೆ. ಆದರೆ ಕೆಲವೇ ತಿಂಗಳಲ್ಲಿ ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *