ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವ್ರ ಲಿಸ್ಟ್ ಇದೆ: ಅಶೋಕ್

Public TV
2 Min Read

– ಅಖಂಡರನ್ನ ಬಿಜೆಪಿಗೆ ಸೇರಿಸಿಕೊಳ್ಳೋ ಪ್ರಶ್ನೆಯೇ ಇಲ್ಲ

ಬೆಂಗಳೂರು: ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವರ ಲಿಸ್ಟ್ ಎಲ್ಲಾ ಇದೆ. ಯಾವ ಯಾವ ಕಾಂಗ್ರೆಸ್ ನಾಯಕರ ಕೈಲಿ ಕೊತ್ತಂಬರಿ, ಕರಿಬೇವಿನ ಸೊಪ್ಪು ಇದೆ ಅಂತ ಮಾಹಿತಿ ಇದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಸೆಳೆಯಲು ಬಿಜೆಪಿ ಒತ್ತಡ ಹಾಕ್ತಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಬಿಜೆಪಿಗೆ ಕರೆಯೋದೇ ಇಲ್ಲ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್‍ಡಿಪಿಐ, ಶಾಸಕರು ಹಾಗೂ ಕಾರ್ಪೊರೇಟರ್ ಮೂವರ ನಡುವೆ ಆಗಿರುವ ಗಲಾಟೆ ಇದು. ಇದು ತ್ರಿಕೋನ ಫೈಟ್. ಕೊಲೆಯಾದ್ರೆ, ತಿದ್ದುಕೊಳ್ಳಲು ಅವಕಾಶವಿದೇಯೇ ಎಂದು ಪ್ರಶ್ನಿಸಿದ ಅವರು, ಕೆ.ಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖ ಬಟಾಬಯಲಾಗಿದೆ. ಅಖಂಡ ಶ್ರೀನಿವಾಸ ಮತ್ತು ಸ್ಥಳೀಯರ ಜೊತೆ ಸಂಬಂಧ ಚೆನ್ನಾಗಿ ಇರಲಿಲ್ಲ ಎಂದು ಸ್ವತಃ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಒಳ ರಾಜಕೀಯವೇ ಗಲಭೆಗೆ ಕಾರಣ ಅನ್ನೋದು ಬಯಲಾದಂತಾಗಿದೆ ಎಂದರು.

ಜಮೀರ್ ಅವರು ಅಖಂಡ ಅವರಿಗೆ ಈಗ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಖಂಡ ಶ್ರೀನಿವಾಸ ಸುಟ್ಟು ಹೋಗಿರುವ ಮನೆ ವಾಪಸ್ ಸಿಗುತ್ತಾ?. ಅಖಂಡ ಕುಟುಂಬದವರು ಕಟ್ಟಿಸಿದ ಮನೆ ಅದಾಗಿತ್ತು. ಈಗ ಜಮೀರ್ ಆ ಥರದ, ಪ್ರೀತಿಯಿದ್ದ ಮನೆ ಕಟ್ಟಿಸ್ತಾರಾ?, ಶಾಸಕರ ತಾಯಿಯ ತಾಳಿ ಸುಟ್ಟು ಹೋಗಿದೆ. ಅದನ್ನ ಕೊಡಲಿಕ್ಕೆ ನಿಮ್ಮಿಂದ ಆಗುತ್ತಾ ಎಂದು ಜಮೀರ್ ಗೆ ತಿರುಗೇಟು ನಿಡಿದರು.

ನಮ್ಮ ಸಮಾಜದಿಂದ ಅವರಿಗೆ ಮನೆ, ಕಾರು ಕೊಡ್ತೇವೆ ಎಂದ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೊತ್ತಂಬರಿ ಸೊಪ್ಪು ರಾತ್ರಿ ಒಂದು ಗಂಟೆಗೆ ಸಿಗುತ್ತಾ?. ಕಾಂಗ್ರೆಸ್ಸಿನವರು ಕೊತ್ತಂಬರಿ, ಕರಿಬೇವು ಸೊಪ್ಪು ಕತೆ ಬಿಡಿ. ಕಾರಣ ಇಲ್ಲದೇ ನಡೆದ ಘಟನೆ ಇದು. ಕಾಂಗ್ರೆಸ್ಸಿನ ಒಳ ಜಗಳದ ದಳ್ಳೂರಿಯಿಂದಾಗಿ ಗಲಭೆ ನಡೆದು ಬೆಂಗಳೂರಿಗೆ ಕಪ್ಪುಚುಕ್ಕೆ ಮಾಡುವ ಹಾಗಾಯಿತು ಎಂದು ಕಿಡಿಕಾರಿದರು.

ಅಡಕೆಗೆ ಹೋದ ಮಾನ ಆನೆ ಕೊಟ್ರು ಬರಲ್ಲ. ಮಾತು ಆಡಿದರೆ ಹೋಯ್ತು. ಮುತ್ತು ಒಡೆದ್ರೆ ಹೋಯ್ತು ಅನ್ನೋ ಹಾಗೇ ಡಿಕೆ ಶಿವಕುಮಾರ್, ಗೃಹ ಸಚಿವರ ವಿರುದ್ಧ ಮಾತಾಡಿದ್ದು ಸರಿಯಲ್ಲ. ರಾಜಕಾರಣದಲ್ಲಿ ಸಾಕಷ್ಟು ಆಸೆಗಳನ್ನ ಇಟ್ಟುಕೊಂಡಿರುವ ನಿಮಗೆ ಇಂತಹ ಹೇಳಿಕೆಗಳಿಂದ ಹಿನ್ನಡೆಯಾಗುತ್ತೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಸ್‍ಡಿಪಿಐ ಬ್ಯಾನ್ ಮಾಡುವ ಬಗ್ಗೆ ಮಾತಾಡ್ತಾ ಇಲ್ಲ. ನಾವು ಬ್ಯಾನ್ ಮಾಡಿ ಅಂತ ಹೇಳ್ತಿದ್ದೇವೆ. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ಎಸ್‍ಡಿಪಿಐ ಬ್ಯಾನ್ ಮಾಡೋಕೆ ಬೇಕಾದ ಎಲ್ಲಾ ವರದಿ ರೆಡಿ ಮಾಡುತ್ತಿದ್ದೇವೆ. 20 ಕೊಲೆಗಳಲ್ಲಿ ಎಸ್‍ಡಿಪಿಐ ಕೈವಾಡ ಇರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಅದೆಲ್ಲಾ ವರದಿ ಮಾಡಿ ಬ್ಯಾನ್ ಮಾಡೋಕೆ ವರದಿ ಸಿದ್ಧವಾಗ್ತಿದೆ. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖ. ಪೊಲೀಸ್ ಮೇಲೆ ಕಾಂಗ್ರೆಸ್ ಮಾಡುವ ಆರೋಪ ಸರಿಯಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *