ಕೊಡಗಿನಲ್ಲಿ ಲಾಕ್‍ಡೌನ್ ಮಾಡಿ, ಇಲ್ಲವೇ ಜಿಲ್ಲೆಗೆ ಬರುವವರಿಗೆ ಸೀಲ್ ಹಾಕಿ

Public TV
1 Min Read

– ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಒತ್ತಾಯ

ಮಡಿಕೇರಿ: ಆರಂಭದಲ್ಲಿ ಒಂದೇ ಕೊರೊನಾ ಪ್ರಕರಣ ಆಗಿದ್ದನ್ನು ಬಿಟ್ಟರೆ ಬಳಿಕ ಕೊಡಗು ಜಿಲ್ಲೆಯಲ್ಲಿ ಪ್ರಕರಣಗಳೇ ಇರಲಿಲ್ಲ. ಆದರೆ ಇದೀಗ 217 ಪ್ರಕರಣಗಳು ಇವೆ. ಅದರಲ್ಲೂ ಬೆಂಗಳೂರಿನಿಂದ ಕೊಡಗಿಗೆ ವಾಪಸ್ ಅಗುತ್ತಿರುವವರಿಂದಲೇ ಡೆಡ್ಲಿ ವೈರಸ್ ಹರಡುತ್ತಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಮತ್ತೆ ಲಾಕ್‍ಡೌನ್ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಪ್ರಕರಣಗಳು ಹೆಚ್ಚುತ್ತಿರುವ ಪಟ್ಟಣಗಳಲ್ಲಿ ಹೀಗಾಗಲೇ ವರ್ತಕರೇ ಸ್ವತಂ ಲಾಕ್‍ಡೌನ್ ಮಾಡಿಕೊಂಡಿದ್ದರೆ, ಇನ್ನು ಕೆಲವು ಪಟ್ಟಣಗಳಲ್ಲಿ ಕೂಡ ಲಾಕ್‍ಡೌನ್ ಮಾಡಿಕೊಳ್ಳುವುದಾಗಿ ಚರ್ಚೆ ನಡೆಸುತ್ತಿವೆ. ಈಗಾಗಲೇ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಪಟ್ಟಣವನ್ನು ಮುಂದಿನ ಸೋಮವಾರದವರೆಗೆ ಲಾಕ್‍ಡೌನ್ ಮಾಡಲಾಗಿದೆ. ಸುಂಟಿಕೊಪ್ಪದ ಛೇಂಬರ್ ಆಫ್ ಕಾಮರ್ಸ್ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಇಂದಿನಿಂದ ಎಲ್ಲ ಅಂಗಡಿ ಮುಂಗಟ್ಟುಗಳು ಸೇರಿದಂತೆ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ದವಾಗಿದೆ.

ಕುಶಾಲನಗರದಲ್ಲೂ ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್‍ಡೌನ್ ಮಾಡಲು ಅಲ್ಲಿನ ಛೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ. ಜಿಲ್ಲಾಡಳಿತ ಕೂಡ ವಾರದ ಕೊನೆಯಲ್ಲಿ ಎರಡು ದಿನ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ. ಹೀಗಾಗಿ ಕುಶಾಲನಗರದಲ್ಲೂ ವಾರದಲ್ಲಿ ಐದು ದಿನ ಯಾವುದೇ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಇದೆಲ್ಲವೂ ವರ್ತಕರೇ ಸ್ವತಃ ತೆಗೆದುಕೊಂಡಿರುವ ನಿರ್ಧಾರಗಳು. ಇದಿಷ್ಟೇ ಅಲ್ಲ, ಮತ್ತೆ ಸಂಪೂರ್ಣ ಲಾಕ್‍ಡೌನ್ ಮಾಡಬೇಕು, ಇಲ್ಲವೇ ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ಮಾಡಿ, ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವವರಿಗೆ ಸೀಲ್ ಹಾಕಿ ಕ್ವಾರಂಟೈನ್ ಮಾಡಬೇಕು ಎಂದು ಜಿಲ್ಲೆಯ ಜನ ಒತ್ತಾಯಿಸುತ್ತಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಲಾಕ್‍ಡೌನ್ ಅಗತ್ಯ ಎಂದು ಜನರು ಒತ್ತಾಯಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *