ಕೊಡಗಿನಲ್ಲಿ ಮಾ.31 ರವರೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾ.31 ರವರೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೊಡಗು ಜಿಲ್ಲೆಯಾದ್ಯಂತ ಈ ತಿಂಗಳಿನಲ್ಲಿ ಆಚರಿಸಲ್ಪಡುವ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಮಾರ್ಚ್ 31 ರವರೆಗೆ ನಿರ್ಬಂಧ ಹೇರಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಪ್ರಕಟಿಸಿದ್ದಾರೆ.

ಪ್ರಾರ್ಥನಾ ಮಂದಿರ, ಪೂಜಾ ಮಂದಿರ, ದೇವಸ್ಥಾನಗಳಲ್ಲಿ ಆಡಳಿತ ಮಂಡಳಿ ವತಿಯಿಂದ ನಡೆಸುವ ದೈನಂದಿನ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆ ಇತ್ಯಾದಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಡಳಿತ ಮಂಡಳಿಯವರು ಪ್ರಾರ್ಥನೆ ಸಲ್ಲಿಸುವವರು ಮತ್ತು ಇತರೆ ಸಹಾಯಕರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಪಡೆದಿರುವ ಆರ್‌ಟಿ ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಈ ಆದೇಶಕ್ಕೆ ಜಿಲ್ಲೆಯಲ್ಲಿ ಪರ ವಿರುದ್ಧ ಚರ್ಚೆಗಳು ನಡೆಯುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಆತಂಕ ಸಾಮಾನ್ಯವಾಗಿ ಸಾರ್ವಜನಿಕರಿಗೆ ಇದೆ. ಹಾಗಾಗಿ ಎಲ್ಲರೂ ಮಾಸ್ಕ್ ಧರಿಸಿಕೊಂಡು ‌ಜೀವನ ನಡೆಸುತ್ತಿದ್ದೇವೆ. ಪಕ್ಕದ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದೆ. ಇದರಿಂದ ಜಿಲ್ಲೆಯ ಗಡಿಭಾಗದಲ್ಲಿ ಹೈಅರ್ಲಟ್ ಅಗಿದೆ. ಈಗ ಶಿವರಾತ್ರಿ ಹಬ್ಬ ಹಾಗೂ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿಂದ ಏಪ್ರಿಲ್‌ ತಿಂಗಳವರೆಗೂ ಕೊಡಗು ಜಿಲ್ಲೆಯ ವಿವಿಧ ಊರುಗಳಲ್ಲಿ ಗ್ರಾಮ ದೇವತೆಗಳ ಹಬ್ಬದ ನಡೆಯುವ ಸಮಯ. ಅಲ್ಲದೆ ದೈವ ಕೋಲಗಳು, ಉತ್ಸವಗಳು ಸೇರಿದಂತೆ ಉರೂಸ್‌ ನಡೆಯುತ್ತದೆ. ಹೀಗೆ ನಡೆಯುವ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಮದುವೆ ಸಮಾರಂಭಗಳಲ್ಲಿ ಸಾವಿರಾರು ಜನರು ಸೇರುತ್ತಾರೆ. ಶನಿವಾರ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಕೇವಲ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ಹಾಕಿರುವುದು ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *