– ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಮಡಿಕೇರಿ: ಭಾರೀ ಮಳೆಯಿಂದಾಗಿ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಅರ್ಚಕರ ಕುಟುಂಬವೇ ಮಣ್ಣಲ್ಲಿ ಸಿಲುಕಿದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರಿದಿದೆ. ಇದರಿಂದಾಗಿ ಜನ ತೀವ್ರ ಆತಂಕಗೊಂಡಿದ್ದಾರೆ.
ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇತ್ತೀಚೆಗೆ ಮಳೆ ಕಡಿಮೆ ಆಯಿತೆಂದು ನಿಟ್ಟುಸಿರು ಬಿಟ್ಟ ಜನತೆಗೆ ಇದೀಗ ಮತ್ತೆ ಮಳೆ ಆರಂಭವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮತ್ತೆ ಭೂ ಕುಸಿತ ಸಂಭವಿಸಿದರೆ ಏನು ಗತಿ ಎಂದು ಜನ ಹೆದರಿಕೆಯಲ್ಲೇ ವಾಸಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು, ಬಿಟ್ಟು, ಬಿಟ್ಟು ಧಾರಾಕಾರವಾಗಿ ಸುರಿಯುತ್ತಿದೆ. ತೀವ್ರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಪರದಾಡುವಂತಾಗಿದೆ. ಇಷ್ಟು ದಿನ ಧಾರಕಾರವಾಗಿ ಸುರಿದ ಮಳೆಗೆ ಅನಾಹುತಗಳು ಸಂಭವಿಸಿದ್ದು, ಈ ಪ್ರಕರಣಗಳು ಮಾಸುವ ಮುನ್ನವೇ ಮತ್ತೆ ವರಣನ ಅಬ್ಬರ ಜೋರಾಗಿದೆ. ಮಳೆಯಿಂದಾಗಿ ಜನ ಹೊರ ಬರದಂತಾಗಿದ್ದು, ಆತಂಕದಲ್ಲೇ ಬದುಕುವ ಸ್ಥಿತಿ ನಿರ್ಮಾಣ ಆಗಿದೆ.