ಕೊಡಗಿನಲ್ಲಿ ಭಾರೀ ಮಳೆ – ಮತ್ತೆ ರಸ್ತೆ ಕುಸಿತ, ಈ ವಾರ ಹಾರಂಗಿ ಭರ್ತಿ ಸಾಧ್ಯತೆ

Public TV
3 Min Read

– ಮಳೆಗೆ ಮಡಿಕೇರಿಯಲ್ಲಿ ಮೊದಲ ಸಾವು
– ಡ್ಯಾಂ ಭರ್ತಿಗೆ 10 ಅಡಿ ಮಾತ್ರ ಬಾಕಿ

ಬೆಂಗಳೂರು/ ಮಡಿಕೇರಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಜುಲೈ 17ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದರೆ, ರಾಯಚೂರು, ಬೀದರ್, ಕಲಬುರಗಿ, ಧಾರವಾಡ, ಯಾದಗಿರಿ, ಬಾಗಲಕೋಟೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮೊದಲ ಸಾವು ಸಂಭವಿಸಿದೆ. ಕಿರು ಹೊಳೆಯಲ್ಲಿ 70 ವರ್ಷದ ಬೊಮ್ಮೇಗೌಡನ ಬಾಬಿ ಕೊಚ್ಚಿ ಹೋಗಿದ್ದಾರೆ. ಮಡಿಕೇರಿ ತಾಲ್ಲೂಕಿನ ಅವ್ವಂದೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಇಂದು ಅಗ್ನಿಶಾಮಕ ಪಡೆ ಕಾರ್ಯಾಚರಣೆ ಮುಂದುವರಿಸಲಿದೆ.

ದೇವಸ್ತೂರಿನ ಹೊಳೆ ತುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಒಂಟಿಮನೆ, ಬಾಣೆ ಗದ್ದೆಗೆ ಸಂಪರ್ಕ ಕಡಿತಗೊಂಡಿದೆ. ದೇವಸ್ತೂರು ಕೆಳಸೇತುವೆಯಂತೂ ಸಂಪೂರ್ಣ ಮುಳುಗಡೆ ಆಗಿದೆ.

ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ವಿವಿಧೆಡೆ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗುತ್ತಿದೆ. ಮಡಿಕೇರಿಯ ಆಕಾಶವಾಣಿ ಕೇಂದ್ರದ ಟವರ್ ಬಳಿಯೇ ಭೂಕುಸಿತ ಕುಸಿತ ಉಂಟಾಗಿದೆ. ಟವರ್‍ನಿಂದ ಕೇವಲ ಐದು ಅಡಿ ದೂರದಲ್ಲಿ ಭೂಕುಸಿತ ಅಗಿದೆ. ಇದನ್ನೂ ಓದಿ: ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚ್ಚರ್ ನಲ್ಲಿ ಹೊತ್ತೊಯ್ದರು

ಕಳೆದ ಬಾರಿ ಕುಸಿದಿದ್ದ ಜಾಗದ ಪಕ್ಕದಲ್ಲೇ ಮತ್ತೆ ಭೂ ಕುಸಿತವಾಗಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಆಕಾಶವಾಣಿ ಟವರ್ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಆತಂಕ ಮನೆ ಮಾಡಿದೆ. ಆಕಾಶವಾಣಿ ಸಿಬ್ಬಂದಿಯಲ್ಲಿ ಭೀತಿ ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಆಕಾಶವಾಣಿ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ. ತಡೆಗೋಡೆ ತಡವಾಗಿ ಮಾಡಿದ್ದೇ ಮತ್ತೆ ಭೂ ಕುಸಿತ ಉಂಟಾಗಲು ಕಾರಣ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಅಕ್ಕಪಕ್ಕದ ಸ್ಥಳದ ಜನರನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.

ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಭವನದ ಮುಂಭಾಗ ಹಾದು ಹೋಗುವ ಮಂಗಳೂರು ಹೆದ್ದಾರಿಯಲ್ಲಿ ಬರೆ ಕುಸಿದಿದೆ. ಕಳೆದ ಬಾರಿಯೂ ಭೂಕುಸಿತ ಸಂಭವಿಸಿದ್ದ ಸಂದರ್ಭದಲ್ಲೇ ಮತ್ತೆ ಬರೆ ಕುಸಿದಿದೆ. ಬರೆ ಕುಸಿದಿರೋದ್ರಿಂದ ಇದೀಗ ಸಮೀಪದ 6 ಕುಟುಂಬಗಳಿಗೆ ಅಪಾಯ ಉಂಟಾಗುವ ಸಂಭವ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆರು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್, ನಗರಸಭೆ ಆಯುಕ್ತರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇದೀಗ ಆರು ಕುಟುಂಬಗಳ ಜನತೆ ಕಾಳಜಿ ಕೇಂದ್ರ ಅಥವಾ ಸಂಬಂಧಿಕರ ಮನೆಗಳಿಗೆ ಶಿಫ್ಟ್ ಆಗಲು ತಯಾರಿ ಮಾಡಿಕೊಳ್ತಿದ್ದಾರೆ.

ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯದ ಮುಂಭಾಗದಲ್ಲಿರುವ ರಸ್ತೆಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ವಾಹನ ಸವಾರರು, ವ್ಯಾಕ್ಸಿನ್‍ಗಾಗಿ ಬಂದ ಸಾರ್ವಜನಿಕರು ಪರದಾಡಿದ್ದಾರೆ. ಹೆಚ್ಚು ಕಡಿಮೆ ಮೊಳಕಾಲುದ್ದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅದ್ರಲ್ಲೇ ಜನ ಒದ್ದಾಡುತ್ತಾ, ಪರದಾಡುತ್ತಾ ಸಂಚಾರ ನಡೆಸಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಈ ವಾರ ಭರ್ತಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಒಂದೇ ದಿನ ನೀರಿನ ಮಟ್ಟ ಮೂರು ಅಡಿ ಏರಿಕೆಯಾಗಿದೆ. ಹಾರಂಗಿ ಜಲಾಶಯದಲ್ಲಿ ಇಂದಿನ ಮಟ್ಟ 2849.55 ಅಡಿಗೆ ಏರಿಕೆಯಾಗಿದ್ದು, ಡ್ಯಾಂ ಭರ್ತಿಯಾಗಲು 10 ಅಡಿಗಳಷ್ಟು ಬಾಕಿ ಇದೆ.

ಹಾರಂಗಿ ಜಲಾಶಯಕ್ಕೆ 7,753 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದೇ ರೀತಿ ಮಳೆಯಾದರೆ ಈ ವಾರಾಂತ್ಯದೊಳಗೆ ಜಲಾಶಯ ಭರ್ತಿ ಆಗಲಿದೆ. ನಾಲ್ಕು ಕ್ರೆಸ್ಟ್ ಗೇಟ್ ತೆರೆದು 4,000 ಕ್ಯೂಸೆಕ್ ನೀರು ಹೊರಬಿಡಲಾಗ್ತಿದೆ. ಅಣೆಕಟ್ಟು ಕೆಳಭಾಗದ ನಿವಾಸಿಗಳು, ಜನ ಜಾನುವಾರುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಣೆಕಟ್ಟು ಅಧಿಕಾರಿಗಳ ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *