ಕೊಡಗಿನಲ್ಲಿ ಪ್ರವಾಹದ ಬಳಿಕವೂ ನದಿ ತೀರದ ಜನರಲ್ಲಿ ಮತ್ತೆ ಅತಂಕ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕುಶಾಲನಗರಕ್ಕೆ ಕಳೆದ ಮೂರು ವರ್ಷಗಳಿಂದ ಪ್ರವಾಹದ ಭೀತಿ ಎದುರಾಗುತ್ತಲೇ ಇದೆ. ಮಳೆಗಾಲದಲ್ಲಿ ಕಣ್ಣೀರಿನ ಕಡಲಲ್ಲಿ ಕೈ ತೊಳೆಯುವ ನದಿ ತೀರದ ನಿವಾಸಿಗಳು ಪ್ರಸ್ತುತ ಜಲಮಂಡಳಿ ಈ ಹಿಂದೆ ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ನದಿ ದಂಡೆಯ ಮಣ್ಣು ಕುಸಿಯುತ್ತಿರುವುದರಿಂದ ಮತ್ತೊಮ್ಮೆ ಆತಂಕ ಎದುರಾಗಿದೆ.

ಜೀವನದಿ ಕಾವೇರಿಯ ಪ್ರವಾಹ ತಗ್ಗಿದ್ದರೂ ಮಾತ್ರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ಬಡಾವಣೆಯ ನದಿ ಪಾತ್ರದಲ್ಲಿ ಮಣ್ಣು ಕುಸಿಯುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಶುರುವಾಗಿದೆ.

ಕಳೆದ ಮೂರು ವರ್ಷಗಳಿಂದ ಸ್ಥಳೀಯರು ಪ್ರವಾಹದ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ಜಲಮಂಡಳಿ ಅಳವಡಿಸಿದ ಒಳಚರಂಡಿಯ ಪೈಪ್‍ಲೈನ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದೇ ಇಷ್ಟಕ್ಕೆಲ್ಲ ಕಾರಣ. ಪೈಪ್‍ಲೈನ್ ಅಳವಡಿಸಿರುವ ಜಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿವೆ. ಸಂಚಾರಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ಹದಗೆಡುತ್ತಿವೆ. ನದಿ ಪಾತ್ರದಲ್ಲಿ ಅವೈಜ್ಞಾನಿಕವಾಗಿ ಪೈಪ್‍ಲೈನ್ ಮಾಡಿದ್ದೇ ಇದಕ್ಕೆಲ್ಲ ಕಾರಣ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೂ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲವೆಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕುವೆಂಪು ಬಡಾವಣೆಯಲ್ಲಿ ಮಾಜಿ ಸೈನಿಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ವಾಸಿಸುತ್ತಿದ್ದಾರೆ. ಈಗಾಗಲೇ ನಂಜುಂಡಸ್ವಾಮಿ ಅವರ ಮನೆಯ ಗೋಡೆಯೊಂದು ಪ್ರವಾಹಕ್ಕೆ ಕುಸಿದಿದೆ. ಇದೇ ರೀತಿ ಹಲವು ಮನೆಗಳ ತಡೆಗೋಡೆಗಳು ಶಿಥಿಲಾವಸ್ಥೆಯಲ್ಲಿವೆ. ಕಳೆದ ಮೂರು ವರ್ಷಗಳಿಂದ ಪ್ರವಾಹದ ನೀರು ಬಡಾವಣೆಯಲ್ಲಿ ನಿಂತು ಹರಿದು ರಸ್ತೆಗಳು ಕಿತ್ತು ಹೋಗಿದ್ದರೂ ಕೂಡ ಮೂರು ವರ್ಷಗಳಿಂದ ಒಂದೇ ಒಂದು ರಸ್ತೆ ನಿರ್ಮಿಸದ ಜಿಲ್ಲಾಡಳಿತದ ವಿರುದ್ಧವೂ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಯ ಕನಸು ಇಟ್ಟುಕೊಂಡು ಹಿಂದೆ ಕಡಿಮೆ ದರದಲ್ಲಿ ಸಿಕ್ಕ ಜಾಗದಲ್ಲಿ ಸಿಕ್ಕಂತಹ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡವರಿಗೆ ಕಳೆದ ಮೂರು ವರ್ಷಗಳಿಂದ ಪ್ರವಾಹದ ಭೀತಿ ಎದುರಾಗಿದೆ. ಜೊತೆಗೆ ನಿಧಾನವಾಗಿ ನದಿದಂಡೆ ಕುಸಿಯುತ್ತಿರುವುದಕ್ಕೆ ಜಲಮಂಡಳಿಯ ಅವೈಜ್ಞಾನಿಕ ಕೆಲಸವೂ ಕಾರಣವೆಂದು ಸ್ಥಳೀಯರು ಆರೋಪಿಸುತ್ತಿದ್ದು, ಇದಕ್ಕೆಲ್ಲ ವಾಸ್ತವವಾಗಿ ಯಾರು ಹೊಣೆಗಾರರು ಎನ್ನುವುದೇ ಇದೀಗ ಬಡವಣೆಯ ನಿವಾಸಿಗಳಿಗೆ ಗೊಂದಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *