ಕೊಟ್ಟ ಗಡುವು ಮುಗಿಯಿತು, ಸಮಾಧಾನ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ: ಕೋಡಿಹಳ್ಳಿ

Public TV
1 Min Read

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ವಿಚಾರ ಕುರಿತಂತೆ, ನಿಮಗೆ ಕೊಟ್ಟ ಗಡುವು ಮುಗಿಯಿತು. ಸಮಾಧಾನ ಪಡಿಸುವ ಮಾತುಗಳನ್ನು ಬಿಟ್ಟು, ಅಭಿವೃದ್ದಿ ಕಡೆಗೆ ಗಮನ ಕೊಡಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ಹೇಳಿದ್ದಾರೆ

ಈ ವಿಚಾರವಾಗಿ ಇಂದು ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸರ್ಕಾರದ ವಿರುದ್ಧ ಡಿಸೆಂಬರ್ 10 ರಿಂದ 14ರವರೆಗೂ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೊನೆಗೂ ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಕಟಿಸಿತ್ತು. ಅಲ್ಲದೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮಾರ್ಚ್ 15 ರವರೆಗೂ ಅಂತಿಮ ಗಡುವು ನೀಡಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ಕಾರ ಒಂದೇ ಒಂದು ಬೇಡಿಕೆ ಪೂರ್ಣಗೊಳಿಸಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

6ನೇ ವೇತನ ಆಯೋಗದ ವರದಿ ಏನಾಯ್ತು? ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಯಂತೂ ಮಾಡಲಿಲ್ಲ. ಆದರೆ ಉಳಿದ 9 ಬೇಡಿಕೆಯಾದರೆ ಪೂರೈಸಬೇಕಿತ್ತು. ಕೇವಲ ಮಾಧ್ಯಮಗಳ ಮುಂದೆ ಬೇಡಿಕೆ ಪೂರೈಕೆಯ ಪ್ರಕಟಣೆಯಷ್ಟೇ ಮುಂದಿಟ್ಟಿದ್ದೀರಾ. ಸಾರಿಗೆ ನಿಗಮಗಳ ಪ್ರಕಟಣೆ ಜಾರಿಗೊಳಿಸುವ ಕೆಲಸವನ್ನು ಮಾಡಿಯೇ ಇಲ್ಲ. 7 ದಿನಗಳಲ್ಲಿ ಮುಗಿಸಬೇಕಾದ ಕೆಲಸಗಳು ಇನ್ನೂ ಕಾರ್ಯಗತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ರಾಜಕೀಯ ನಾಯಕರು ಮಂತ್ರಿಗಿರಿ ಸಿಗದಿದ್ದಾಗ ಅದಕ್ಕೆ ಸಮಾಧಾನ ಮಾಡಲು ನಿಗಮಗಳ ಮುಂದಿಟ್ಟು ಖರ್ಚು ಮಾಡುತ್ತಾ ಇದ್ದೀರಾ? ಇದು ಸರಿ ಇಲ್ಲ. ಅಲ್ಲದೆ ಸಾರಿಗೆ ನಷ್ಟ ಭರಿಸಲು ನೌಕರರ ಸಂಬಳ ಕಟ್ ಮಾಡುತ್ತಿರುವುದು ನ್ಯಾಯಬದ್ದವಲ್ಲ. ಸೇವಾ ಸಂಸ್ಥೆಗಳು ಉಚಿತವಾಗಿ ಸೇವೆ ನೀಡಲಿ. ಆದರೆ ನೌಕರನಿಗೆ ಹೊರೆ ಬೇಡ. ಕೋಟಿ ಗಟ್ಟಲೆ ಇರುವ ಸಂಸ್ಥೆ ನಷ್ಟಕ್ಕೆ ನೀವೇ ಹೊಣೆಯಾಗಲಿದ್ದೀರಿ ಎಂದು ಪ್ರತಿಭಟನೆ ಎಚ್ಚರಿಕೆ ನೀಡಿದರು

ಸರ್ಕಾರಕ್ಕೆ ನೀಡಿದ ಗಡುವು ಅಂತಿಮಗೊಳ್ಳುತ್ತಿದೆ ಆದರೆ ಇಲ್ಲಿಯವರೆಗೂ ಈ ಕುರಿತಂತೆ ಯಾವುದೇ ಮಾತುಕತೆ ನಡೆಸಿಲ್ಲ. ಕೇವಲ ಘೋಷಣೆಗಳ ಪೂರೈಕೆ ಬಗ್ಗೆ ಭರವಸೆ ಮಾತ್ರ ಕೊಡುತ್ತಿದ್ದೀರಿ. ಇದು ಬೇಡ. ಸರ್ಕಾರ ಸಾರಿಗೆ ನೌಕರರ ವಿಚಾರವಾಗಿ ಗಮನ ಹರಿಸಿ ಬೇಡಿಕೆ ಈಡೇರಿಸಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *