ಕೈ ತಾಗಿಸದೇ ದೇಗುಲದ ಘಂಟೆ ಬಾರಿಸಬಹುದು- ವಿಡಿಯೋ ನೋಡಿ

Public TV
1 Min Read

– ಕೊರೊನಾದಿಂದಾಗಿ ಹೊಸ ತಂತ್ರಜ್ಞಾನ
– ಪಶುಪತಿ ದೇವಾಲಯದಲ್ಲಿ ಘಂಟೆ ನಾದ

ಭೋಪಾಲ್: ಲಾಕ್‍ಡೌನ್ ನಿಂದಾಗಿ ಬಾಗಿಲು ಹಾಕಿದ್ದ ದೇವಾಲಯಗಳು ಜೂನ್ 8ರಿಂದ ತೆರೆದಿವೆ. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಘಂಟೆ ಬಾರಿಸುವುದಕ್ಕೆ ನಿಷೇಧಿಸಲಾಗಿದೆ. ಕೆಲವು ದೇವಾಲಯದ ಆಡಳಿತ ಮಂಡಳಿಗಳು ಘಂಟೆಗೆ ಬಟ್ಟೆಯನ್ನು ಸುತ್ತಿವೆ. ಮಧ್ಯಪ್ರದೇಶದ ಮಂದಸೌರ್ ಪಟ್ಟಣದ ಪಶುಪತಿ ದೇವಾಲಯದಲ್ಲಿ ಕೈ ತಾಗಿಸದೇ ಘಂಟೆ ಬಾರಿಸುವ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ದೇವಾಲಯಕ್ಕೆ ಆಗಮಿಸುವ ಭಕ್ತರು ಸಹ ಕೈ ತಾಗಿಸದೇ ಘಂಟೆ ಬಾರಿಸಿ ಪುನೀತರಾಗುತ್ತಿದ್ದಾರೆ. ದೇವಾಲಯದಲ್ಲಿ ಘಂಟೆ ಬಾರಿಸೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಏನಿದು ತಂತ್ರಜ್ಞಾನ?: ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ನಾಹರೂ ಖಾನ್ ಸೆನ್ಸಾರ್ ಘಂಟೆಯನ್ನು ಸಿದ್ಧಪಡಿಸಿದ್ದಾರೆ. ಕೊರೊನಾ ಭಯದಿಂದ ಘಂಟೆ ಬಾರಿಸಲು ಮಂದಿರಗಳಲ್ಲಿ ಅವಕಾಶ ನೀಡಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮಸೀದಿಗಳಲ್ಲಿ ಅಝಾನ್ ಕೇಳಿಸುತ್ತದೆ. ಹಾಗೆ ದೇವಲಾಯದಲ್ಲಿಯೂ ಘಂಟೆಯ ನಾದ ಕೇಳಿಸುವಂತಾಗಬೇಕು ಎಂಬ ಚಿಂತೆ ನನ್ನನ್ನು ಕಾಡಿತ್ತು.

ಸತತ ಮೂರು ದಿನಗಳ ಪರಿಶ್ರಮದಿಂದ ಈ ಸೆನ್ಸಾರ್ ಆಧಾರಿತ ಘಂಟೆಯನ್ನು ಸಿದ್ಧಪಡಿಸಲಾಗಿದೆ. ಭಕ್ತರು ಘಂಟೆಯ ಕೆಳಗೆ ನಿಂತು ತಮ್ಮ ಮುಖ ಅಥವಾ ಕೈಯನ್ನು ತೋರಿಸಿದ್ರೆ ಘಂಟೆ ಬಾರಿಸಲು ಆರಂಭಿಸುತ್ತದೆ. ಸೆನ್ಸಾರ್ ಘಂಟೆ ಅಳವಡಿಸಿದ ದೇಶದ ಮೊದಲ ದೇಗುಲ ಇದಾಗಿದೆ ಎಂದು ನಾಹರೂ ಖಾನ್ ಹೇಳುತ್ತಾರೆ.

ದೇವಸ್ಥಾನದಲ್ಲಿರೋ ಘಂಟೆಗಳಿಗೆ ವಿಶೇಷವಾದ ಮಹತ್ವವಿದೆ. ಸ್ಥಳೀಯ ನಾಹರೂ ಖಾನ್ ಅವರಿಂದಾಗಿ ದೇವಸ್ಥಾನದಲ್ಲಿ ಸೆನ್ಸಾರ್ ಘಂಟೆಯನ್ನು ಅಳವಡಿಸಲಾಗಿದೆ. ಭಕ್ತರು ಕೈ ಅಥವಾ ಮುಖ ತೋರಿಸಿದ್ರೆ ಸಾಕು ಘಂಟೆ ಮೊಳಗುತ್ತದೆ ಎಂದು ದೇವಾಲಯ ಅರ್ಚಕ ಕೈಲಾಶ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *