ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಯಿತು ಕೊರೊನಾ ಸೋಂಕು, ಪ್ರತಿಷ್ಠಿತ ಕಂಪನಿಗಳು ಸೀಲ್‍ಡೌನ್

Public TV
2 Min Read

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಓಟಕ್ಕೆ ಬ್ರೇಕ್ ಇಲ್ಲವಾಗಿದೆ. ಈ ಮಧ್ಯೆ ಕೈಗಾರಿಕಾ ಪ್ರದೇಶಗಳಲ್ಲಿ ಕೊರೊನಾ ವೈರಸ್ ಉತ್ಪಾದನೆಯಾಗುವ ಮೂಲಕ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ದೇಶದ ಪ್ರತಿಷ್ಠಿತ ವಿಸ್ಟ್ರಾನ್ ಹಾಗೂ ಹೋಂಡಾ ಕಂಪನಿಯಲ್ಲಿ ಸೋಂಕು ಪತ್ತೆಯಾಗಿದ್ದು ಕೈಗಾರಿಕಾ ಪ್ರದೇಶ ಬಹುತೇಕ ಬಂದ್ ಆಗಿದೆ.

ಕೊರೊನಾ ಲಾಕ್‍ಡೌನ್ ವೇಳೆ ಕಾರ್ಮಿಕರಿಗೆ ಹಾಗೂ ದಿನಗೂಲಿ ಕೆಲಸಗಾರರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕೈಗಾರಿಕೆಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ವಿನಾಯಿತಿ ನೀಡಿದೆ. ಆದರೆ ಇದನ್ನ ಸಹಿಸದ ಕೊರೊನಾ ಆ ಕೈಗಾರಿಕಾ ಪ್ರದೇಶಗಳಲ್ಲೂ ತನ್ನ ಅಟ್ಟಹಾಸ ಮೆರೆಯುವ ಮೂಲಕ ಕೈಗಾರಿಕಾ ಪ್ರದೇಶಕ್ಕೆ ಬೀಗ ಹಾಕಿದೆ. ಹೌದು ಕೋಲಾರ ತಾಲೂಕು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಪ್ರತಿಷ್ಠಿತ ಕಂಪನಿಗಾಳಾದ ವಿಸ್ಟ್ರಾನ್ ಹಾಗೂ ಹೋಂಡಾ ಕಂಪನಿಗಳಲ್ಲಿ ಕೆಲಸ ಮಾಡುವ ನೂರಾರು ಜನ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಹಲವು ಜನ ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಹೊಂಡಾ ಹಾಗೂ ವಿಸ್ಟ್ರಾನ್ ಕಂಪನಿಗಳನ್ನು ಒಂದು ವಾರದ ಕಾಲ ಬಂದ್ ಮಾಡಲಾಗಿದೆ. ವಿಸ್ಟ್ರಾನ್ ಕಂಪನಿಯಲ್ಲಿ ಸುಮಾರು 120 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಹೋಂಡಾ ಕಂಪನಿಯಲ್ಲೂ ಸುಮಾರು 100 ಕ್ಕೂ ಹೆಚ್ಚು ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ. ಪರಿಣಾಮ ಕೈಗಾರಿಕೆಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಿ, ಕೆಲ ದಿನಗಳ ಕಾಲ ಕೈಗಾರಿಕೆಗಳ ಉತ್ಪಾದನೆಯನ್ನು ಸ್ಥಗಿತ ಮಾಡಲಾಗಿದೆ.

ಕೈಗಾರಿಕಾ ಪ್ರದೇಶದಲ್ಲಿನ ದೈತ್ಯ ಕಂಪನಿಗಳಲ್ಲಿ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿದ್ದ ಸಣ್ಣ ಸಣ್ಣ ಕಂಪನಿಗಳು ಕೂಡಾ ಒಂದು ವಾರಗಳ ಕಾಲ ಬಂದ್ ಮಾಡಿವೆ. ಇನ್ನು ಕೆಲವು ಕಂಪನಿಗಳು ಕೆಲಸಕ್ಕೆ ಬರುವ ಕಾರ್ಮಿಕರು ಕಂಪನಿಗೆ ಹಾಜರಾಗಬೇಕಾದ್ರೆ ಅದಕ್ಕೂ ಮುನ್ನ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಸರ್ಟಿಪಿಕೇಟ್ ತರಬೇಕು ಎಂದು ಹೇಳಿವೆ.

ಹಾಗಾಗಿ ಕೋಲಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೊರೊನಾ ಟೆಸ್ಟ್ ಮಾಡಿಸಲು ಸಾವಿರಾರು ಸಂಖ್ಯೆಯ ಕಾರ್ಮಿಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ಸಿಬ್ಬಂದಿಗಳ ಕೊರೆತೆಯಿಂದ ಸಮರ್ಪಕವಾಗಿ ಹಾಗೂ ಶೀಘ್ರವಾಗಿ ಟೆಸ್ಟ್ ಮಾಡಲಾಗದೆ ಸಿಬ್ಬಂದಿಗಳು ಸರ್ಕಸ್ ಮಾಡುತ್ತಿದ್ದರೆ ಕಾರ್ಮಿಕರು ಕೊರೊನಾ ಟೆಸ್ಟ್ ಗಾಗಿ ಸಂಜೆವರೆಗೂ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಜಿಲ್ಲಾಸ್ಪತ್ರೆಯ ಬಳಿ ಕಂಡು ಬಂದಿತ್ತು. ಪರಿಣಾಮ ಜಿಲ್ಲಾದಿಕಾರಿ ಡಾ.ಆರ್.ಸೆಲ್ವಮಣಿ ಭೇಟಿ ನೀಡಿ ಕೈಗಾರಿಕೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಕೈಗಾರಿಕೆಗಳಲ್ಲೆ ವ್ಯವಸ್ಥೆ ಮಾಡುವಂತೆ ಆಯಾ ಕೈಗಾರಿಕೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಕೊರೊನಾವನ್ನು ಕಟ್ಟಿ ಹಾಕಲು ರಾಜ್ಯ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿ, ಕೈಗಾರಿಕೆ ಸೇರಿದಂತೆ ಕೆಲವು ವಲಯಗಳಿಗೆ ವಿನಾಯಿತಿ ನೀಡಿತ್ತು. ಆದರೆ ಅದನ್ನು ಸಹಿಸದ ಕೊರೊನಾ ಆ ಕ್ಷೇತ್ರಗಳ ಮೇಲೆ ತನ್ನ ವಕ್ರ ದೃಷ್ಟಿ ಬೀರಿದೆ. ಈ ಮೂಲಕ ಕೈಗಾರಿಕಾ ಪ್ರದೇಶದಲ್ಲೂ ಕೊರೊನಾದ್ದೇ ಕಾರುಬಾರು ಎನ್ನುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *