ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ

Public TV
2 Min Read

ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.25 ಕೋಟಿ ರೂ. ಮೌಲ್ಯದ ಮಾಧಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಕ ವಸ್ತುಗಳ ನಿರ್ಮೂಲನೆಗೆ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ನಮ್ಮ ದೇಶಿ ಗಾಂಜಾದಿಂದ ಹಿಡಿದು ವಿದೇಶದಲ್ಲಿನ ಬೇರೆ ರೂಪದಲ್ಲಿ ಡ್ರಗ್ಸ್ ಮಾರಾಟ ಜಾಲ ಬೆಳೆದಿದೆ. ಆದ್ದರಿಂದ ‘ಡ್ರಗ್ಸ್ ಫ್ರೀ ಸಿಟಿ’ ಮಾಡುವ ಉದ್ದೇಶದಿಂದ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಎಲ್‍ಎಸ್‍ಡಿ ಸೇರಿದಂತೆ ಬೇರೆ ರೂಪದಲ್ಲಿ ಮಾದಕ ವಸ್ತುಗಳು ಬರುತ್ತಿದೆ. ಶಾಲಾ, ಕಾಲೇಜುಗಳ ಬಳಿಯೇ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ವ್ಯವಸ್ಥಿತವಾದ ದಂಧೆಯನ್ನಾಗಿ ನಡೆಸಲಾಗುತ್ತಿದ್ದು, ಸರ್ಕಾರ ಕಡಿವಾಣಕ್ಕೆ ಸೂಚನೆ ನೀಡಿದೆ. ಇನ್ನು ಮುಂದೆ ಕಾಲೇಜುಗಳ ಕ್ಯಾಂಪಸ್‍ನಲ್ಲಿ ಡ್ರಗ್ಸ್ ಪತ್ತೆಯಾದರೆ ಮ್ಯಾನೇಜ್‍ಮೆಂಟ್ ವಿರುದ್ಧ ದೂರು ದಾಖಲಿಸಲಾಗುತ್ತದೆ. ಡ್ರಗ್ಸ್ ಕ್ಯಾಂಪಸ್ ಒಳಗೆ ಬರದಂತೆ ತಡೆಯುವುದು ಮ್ಯಾನೇಜ್‍ಮೆಂಟ್ ಜವಾಬ್ದಾರಿ ಎಂದು ಸಚಿವರು ತಿಳಿಸಿದರು.

ಪೋಷಕರಿಂದ ಹಣ ಹೆಚ್ಚಿಗೆ ಪಡೆದು ಇಂತಹ ಚಟಗಳಿಗೆ ದಾಸರಾಗುತ್ತಿದ್ದಾರೆ. ಬಹಳ ದೊಡ್ಡವರು ಹಾಗೂ ಅವರ ಮಕ್ಕಳು ಜಾಲದಲ್ಲಿ ಇರುವ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಮುಂದೆ ಇದು ಕಂಡು ಬಂದರೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ವಿದೇಶದಿಂದ ಬಂದು ಇಲ್ಲಿ ಸಾಕಷ್ಟು ಜನ ನೆಲೆಸಿದ್ದಾರೆ. ಇದುವರೆಗೂ 533 ಪ್ರಕರಣ ದಾಖಲಿಸಿ, 14 ವಿದೇಶಿಯರು ಸೇರಿ 799 ಜನ ಬಂಧನವಾಗಿದೆ. 2019 ರಲ್ಲಿ 1260 ಆರೋಪಿಗಳನ್ನ ಬಂಧಿಸಿದ್ದು, 768 ಕೇಸ್ ಹಾಕಲಾಗಿತ್ತು. ಕೋವಿಡ್ 19 ಮುಗಿದ ಕೂಡಲೇ ಎಲ್ಲಾ ಕಾಲೇಜು, ಹಾಸ್ಟಲ್ ಮಾದಕ ವಸ್ತು ವಿರೋಧಿ ಅಭಿಯಾನ ಮಾಡುತ್ತೇವೆ. ಈಗಾಗಲೇ ಎಂಟು ಸೆನ್ ಪೊಲೀಸ್ ಸ್ಟೇಷನ್ ಗಳು ಮಾಡಿದ್ದು, ಟೆಕ್ನಿಕಲ್ ಎಕ್ಸ್ ಪರ್ಟ್ ಬೇಕಾಗಿದ್ದು ಅಂಥವರನ್ನು ನೇಮಕ ಮಾಡಲಾಗುತ್ತಿದೆ. ಅಲ್ಲದೇ ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು, ಅದರ ಕಡಿವಾಣಕ್ಕೆ ಮುಂದಾಗಿದ್ದಾವೆ ಎಂದು ವಿವರಿಸಿದರು.

ಕೇರಳ ಮೂಲದ ಡ್ರಗ್ ಡೀಲರ್ ಗಳಾದ ಶಹದ್ ಮೊಹಮ್ನದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್, ನಿತಿನ್ ಮೋಹನ್ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕಿಂಗ್ ಪಿನ್ ಧೀರಜ್ ಹೇಳಿದಂತೆ ಡ್ರಗ್ ಡೀಲ್ ಮಾಡುತ್ತಿದ್ದರು. ಧೀರಜ್ ಈತ ನೆದರ್‍ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಡ್ರಗ್ ತರಿಸುತ್ತಿದ್ದ. ತನ್ನ ಹುಡುಗರ ಮೂಲಕ ಡ್ರಗ್ ರಿಸೀವ್ ಮಾಡಿಸಿಕೊಂಡು ಮಾರಾಟ ಮಾಡುತ್ತಿದ್ದ. ಇಂಥವರಿಗೆ ಮಾರಾಟ ಮಾಡಬೇಕು ಎಂದು ಮೆಸೇಜ್ ಮಾಡುತ್ತಿದ್ದ. ನೋಡಲು ಬಣ್ಣ ಬಣ್ಣ, ಚಿತ್ರ ವಿಚಿತ್ರದ ಪೇಪರ್ ರೀತಿ ಕಾರಣುತ್ತಿದ್ದ ಅವುಗಳಿಗೆ ಒಂದಕ್ಕೆ 5 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದಂತೆ ಕಿಂಗ್ ಪಿನ್ ಧೀರಜ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *