ಕೇರಳ ಭೂಕುಸಿತ- ಮೃತರ ಕುಟುಂಬಕ್ಕೆ ಪಿಎಂ ಮೋದಿ 2, ಸಿಎಂ 5 ಲಕ್ಷ ಪರಿಹಾರ

Public TV
2 Min Read

– ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ

ತಿರುವನಂತಪುರಂ: ಭಾರೀ ಮಳೆಯಿಂದ ಕೆರಳದ ಇಡುಕ್ಕಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 15 ಜನ ಸಾವನ್ನಪ್ಪಿದ್ದು, 15 ಜನರನ್ನು ರಕ್ಷಿಸಲಾಗಿದೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಹಾರ ಘೋಷಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರನ್ನು ಮುನ್ನಾರ್ ನ ಟಾಟಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ನೋವಾಗಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಲಾಗಿದ್ದು, ಸಾವನ್ನಪ್ಪಿದವರ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ.ಘೋಷಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಮುನ್ನಾರ್ ನಿಂದ 25 ಕಿ.ಮೀ.ದೂರದಲ್ಲಿರುವ ರಾಜಾಮಲೈ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಸುಮಾರು 80 ಜನ ಈ ಪ್ರದೇಶದಲ್ಲಿ ವಾಸವಿದ್ದರು. ಮಣ್ಣಿನಡಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಕುರಿತು ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ತಾಲೂಕು ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಗುರುವಾರ ಕೊಚ್ಚಿ ಹೋಗಿದ್ದು, ಘಟನೆ ನಡೆದ ಪ್ರದೇಶವನ್ನು ತಲುಪುವುದು ಕಷ್ಟಸಾಧ್ಯವಾಗಿದೆ. ಕಠಿಣ ಭೂ ಪ್ರದೇಶ ಇರುವುದರಿಂದ ರಕ್ಷಣಾ ತಂಡಗಳು ತಲುಪುವುದು ಸಹ ತಡವಾಗುತ್ತಿದೆ.

ಅಗ್ನಿಶಾಮಕ ದಳದ 50 ಸದಸ್ಯರ ವಿಶೇಷ ಕಾರ್ಯಪಡೆಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದ್ದು, ರಾತ್ರಿ ಕೆಲಸ ಮಾಡಲು ಸಹ ಇವರ ಬಳಿ ಸಲಕರಣೆಗಳಿವೆ. ಇದರೊಂದಿಗೆ ತುರ್ತು ಸೇವೆಗಳ ಸಿಬ್ಬಂದಿಯನ್ನು ಸಹ ಕಳುಹಿಸಲಾಗಿದೆ. ಅಲ್ಲದೆ ಪರಿಹಾರ ಕಾರ್ಯಕ್ಕಾಗಿ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಎನ್‍ಡಿಆರ್‍ಎಫ್ ಸಿಬ್ಬಂದಿ ಸ್ಥಳ ತಲುಪಿದ್ದು, ತ್ರಿಶೂರ್ ನ ಎರಡನೇ ತಂಡ ಸಹ ಸ್ಥಳದಲ್ಲಿದೆ. ಅವರೊಂದಿಗೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಹಾಗೂ ಕಂದಾಯ ಅಧಿಕಾರಿಗಳು ಸಹ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *