ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ- ಎರಡು ಜಿಲ್ಲೆಗಳಲ್ಲಿ ಹೈ ಅಲರ್ಟ್

Public TV
1 Min Read

– ಹಕ್ಕಿ ಜ್ವರವನ್ನು ರಾಜ್ಯ ವಿಪತ್ತು ಎಂದು ಘೋಷಿಸಿದ ಸರ್ಕಾರ
– 48 ಸಾವಿರ ಪಕ್ಷಿಗಳನ್ನು ಕೊಲ್ಲಲು ನಿರ್ಧಾರ

ತಿರುವನಂತಪುರಂ: ಹಕ್ಕಿ ಜ್ವರ ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಘೋಷಿಸಿದೆ. ರಾಜ್ಯದ ಕೊಟ್ಟಯಂ ಹಾಗೂ ಆಲಪ್ಪುಳ ಜಿಲ್ಲೆಗಳಲ್ಲಿ ಈ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸರ್ಕಾರ ಹೈ ಅಲರ್ಟ್ ಘೋಷಿಸಿದೆ.

ಎರಡೂ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸತ್ತ ಬಾತುಕೋಳಿಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ವೇಳೆ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ. ಆದರೆ ಈ ಜ್ವರವೂ ಮನುಷ್ಯರಿಗೆ ಹರಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹಕ್ಕಿ ಜ್ವರದಿಂದಾಗಿ ಕೊಟ್ಟಯಂನ ನೀಂದೂರ್ ಪಂಚಾಯಿತಿ ವ್ಯಾಪ್ತಿಯ ಜಮೀನಿನಲ್ಲಿ ಸುಮಾರು 1,650 ಬಾತುಕೋಳಿಗಳು ಸಾವನ್ನಪ್ಪಿದ್ದು, ಇದು ಪ್ರತ್ಯೇಕ ಪ್ರದೇಶವಾದ್ದರಿಂದ ಜನರಿಗೆ ಹರಡಿಲ್ಲ ಎನ್ನಲಾಗಿದೆ. ಆದರೂ ಕೊಟ್ಟಯಂ ಜಿಲ್ಲೆಯಲ್ಲಿ ತಲಾ 5 ಜನರ 8 ತಂಡಗಳನ್ನು ನೇಮಿಸಲಾಗಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಕೇವಲ ಕೊಟ್ಟಯಂ ಮಾತ್ರವಲ್ಲದೆ ಆಲಪ್ಪುಳ ಹಾಗೂ ಕುಟ್ಟನಾಡ್ ಪ್ರದೇಶದಲ್ಲಿ ಸಹ ಈ ಹಕ್ಕಿ ಜ್ವರ ಪತ್ತೆಯಾಗಿರುವುದು ಆತಂಕವನ್ನು ಸೃಷ್ಟಿಸಿದೆ. ತಲವಾಡಿ, ಎಡತ್ವಾ, ಪಲ್ಲಿಪಾಡ್ ಹಾಗೂ ತಜಕ್ಕರ ಪಂಚಾಯಿತಿ ಪ್ರದೇಶಗಳಿಗೂ ಹಬ್ಬಿದೆ. ಅನೇಕ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸಹ ತೆರೆಯಲಾಗಿದೆ. ಅಲ್ಲದೆ ರ್ಯಾಪಿಡ್ ರಿಸ್ಪಾನ್ಸ್ ಫೋರ್ಸ್‍ಗಳನ್ನು ಹಾಕಲಾಗಿದೆ.

ಅಲ್ಲದೆ ಹಕ್ಕಿ ಜ್ವರದ ಭೀತಿಯಿಂದಾಗಿ ನಿಯಂತ್ರಣಕ್ಕೆ ತರಲು ಒಂದು ಕಿ.ಮೀ.ವ್ಯಾಪ್ತಿಯಲ್ಲಿನ ಎಲ್ಲ ಪಕ್ಷಿಗಳನ್ನು ಕೊಲ್ಲುವ ನಿರ್ಧಾರ ಕೈಗೊಳ್ಳಲಾಗಿದೆ. ಸಾಕು ಪಕ್ಷಿಗಳನ್ನೂ ಸೇರಿದಂತೆ ಸುಮಾರು 48 ಸಾವಿರ ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ.

ವನ್ಯಜೀವಿ ಸಚಿವ ಕೆ.ರಾಜು ಅವರು ಈ ಕುರಿತು ಮಾತನಾಡಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಳಿಕ ರೈತರಿಗೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಸಹ ಕೋಯಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಸಹ ಜನರಿಗೆ ಹರಡಬಾರದು ಎಂಬ ಮುನ್ನೆಚ್ಚರಿಕೆ ಉದ್ದೇಶದಿಂದ ಹಕ್ಕಿಗಳನ್ನು ಕೊಲ್ಲಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *