ಕೇಂದ್ರ ಆರೋಗ್ಯ ಸಚಿವರಿಂದ ಕರೆ- ಚಾಮರಾಜನಗರಕ್ಕೆ ಮೆಚ್ಚುಗೆ

Public TV
1 Min Read

– ಹಾಟ್‍ಸ್ಪಾಟ್‍ಗಳ ಮಧ್ಯೆ ಇದ್ದರೂ ಕೊರೊನಾ ಬಂದಿಲ್ಲ
– ದಕ್ಷಿಣ ಭಾರತದ ಏಕೈಕ ಜಿಲ್ಲೆ ಚಾಮರಾಜನಗರ

ಚಾಮರಾಜನಗರ: ಹಾಟ್‍ಸ್ಪಾಟ್‍ಗಳ ಮಧ್ಯೆ ಇದ್ದರೂ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು. ರಾಜ್ಯದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಜಿಲ್ಲೆಗಳಲ್ಲಿ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಜಿಲ್ಲೆ ಪಾತ್ರವಾಗಿದೆ. ವಿಶೇಷವೆಂದರೆ ಜಿಲ್ಲೆಯು ಕೊರೊನಾ ಹಾಟ್‍ಸ್ಪಾಟ್ ಜಿಲ್ಲೆ ಹಾಗೂ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ತಮಿಳುನಾಡು, ಕೇರಳ ರಾಜ್ಯಗಳು ಒಂದೆಡೆಯಾದರೆ ಮೈಸೂರು, ಮಂಡ್ಯ ಇನ್ನೊಂದೆಡೆ ಇವೆ. ಹೀಗಿದ್ದರೂ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.

ಜಿಲ್ಲಾಡಳಿತದ ಕಾರ್ಯವೈಖರಿ, ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ.

“ಕೇಂದ್ರ ಆರೋಗ್ಯ ಸಚಿವರ ಕರೆ ನಿರೀಕ್ಷೆ ಮಾಡಿರಲಿಲ್ಲ. ಬಹಳ ಆಶ್ಚರ್ಯ ಜೊತೆಗೆ ಹೆಮ್ಮೆಯಾಯ್ತು. ಬಹಳ ಖುಷಿಯಾಗಿದೆ, ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಕೇಂದ್ರ ಸಚಿವರೇ ಕರೆ ಮಾಡಿರುವುದು ಬಹಳ ಅಪರೂಪದ ಸಂಗತಿ. ನಮ್ಮ ಇಡೀ ತಂಡಕ್ಕೆ ಹಾಗೂ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿದರು” ಎಂದು ಡಾ.ಎಂ.ಆರ್.ರವಿ ಹೇಳಿದ್ದಾರೆ.

“ಸ್ವತಃ ಆರೋಗ್ಯ ಸಚಿವರೇ ಖುದ್ದಾಗಿ ಗುರುತಿಸಿರುವುದು ಹೆಮ್ಮೆಯ ಸಂಗತಿ. ದೆಹಲಿಗೆ ಬಂದಾಗ ತಮ್ಮ ಕಚೇರಿಗೆ ಬಂದು ಹೋಗುವಂತೆ ಆರೋಗ್ಯ ಸಚಿವರು ತಿಳಿಸಿದ್ದಾರೆ” ಎಂದರು.

ದಕ್ಷಿಣ ಭಾರತದಲ್ಲಿಯೇ ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಇದುವರೆಗೂ ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಪತ್ತೆಯಾಗಿರಲಿಲ್ಲ. ಆದರೆ ವಾರಂಗಲ್ ಗ್ರಾಮೀಣ ಭಾಗದಲ್ಲಿ ಮಂಗಳವಾರ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ದಕ್ಷಿಣ ಭಾರತದಲ್ಲಿ ಕೊರೊನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಪಾತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *