ಕೇಂದ್ರದಿಂದ ರಾಜ್ಯಗಳಿಗೆ 2 ಆಯ್ಕೆ – ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ?

Public TV
1 Min Read

ಬೆಂಗಳೂರು: ಕೋವಿಡ್ 19ನಿಂದಾಗಿ ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್ ಎನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಮುಂದೂಡಲ್ಪಟ್ಟಿದೆ. ಅದು ಯಾವಾಗ ನಡೆಯಲಿದೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಕರ್ನಾಟಕ ಸರ್ಕಾರ ಜುಲೈನಲ್ಲಿ ಪರೀಕ್ಷೆ ನಡೆಸಲು ಒಲವು ವ್ಯಕ್ತಪಡಿಸಿದೆ.

ಭಾನುವಾರ ಕೇಂದ್ರ ಸರ್ಕಾರ ನಡೆಸಿದ ಸಿಬಿಎಸ್‍ಸಿ 12ನೇ ತರಗತಿಗಳ ಪರೀಕ್ಷೆ ನಿಗದಿ ಕುರಿತ ಸಭೆಯಲ್ಲಿ, ಸೋಂಕು ಇಳಿಕೆಯಾದ ಕೂಡಲೇ ಎಕ್ಸಾಂ ನಡೆಸಲು ಅವಕಾಶ ನೀಡಿ. ಒಂದ್ವೇಳೆ ಜುಲೈನಲ್ಲಿ ಪರೀಕ್ಷೆಗಳನ್ನು ಆಯೋಜಿಸಿದ್ರೆ ಆಗಸ್ಟ್ ನಲ್ಲಿ ಫಲಿತಾಂಶ ನೀಡಬಹುದು ಎಂದು ಸಚಿವ ಸುರೇಶ್ ಕುಮಾರ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಸಭೆಯಲ್ಲಿ ಹಲವು ರಾಜ್ಯಗಳು ಕೊರೊನಾ ನಡುವೆ  ಎಕ್ಸಾಂ ನಡೆಸೋದು ಸರಿಯಲ್ಲ ಎಂದು ಆಕ್ಷೇಪ ಎತ್ತಿವೆ. ಆದರೂ, ಕೇಂದ್ರ ಕೂಡ ರಾಜ್ಯ ಸರ್ಕಾರಗಳಿಗೆ ಎರಡು ಆಯ್ಕೆ ನೀಡಿದೆ. ನಾಳೆಯೊಳಗೆ ನಿಮ್ಮ ಅಭಿಪ್ರಾಯ ತಿಳಿಸಿ. ಜೂನ್ ಒಂದಕ್ಕೆ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದಿದೆ.

ಆಯ್ಕೆ 1
ಮುಂದಿನ 3 ತಿಂಗಳಲ್ಲಿ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಿ, ಆಗಸ್ಟ್‍ನಲ್ಲಿ ಮುಖ್ಯ ವಿಷಯಗಳ ಪರೀಕ್ಷೆಯನ್ನಷ್ಟೇ ನಡೆಸುವುದು. ಸೆಪ್ಟೆಂಬರ್ ವೇಳೆಗೆ ಫಲಿತಾಂಶ ನೀಡುವುದು. ಪರೀಕ್ಷೆ ದಿನಾಂಕ ನಿಗದಿಯನ್ನು ರಾಜ್ಯಗಳಿಗೆ ಬಿಡುವುದು.

ಆಯ್ಕೆ 2
ಪರೀಕ್ಷೆ ಅವಧಿಯನ್ನು 3 ಗಂಟೆ ಬದಲು 90 ನಿಮಿಷಕ್ಕೆ ಇಳಿಸುವುದು. 2 ಹಂತಗಳಲ್ಲಿ ಪರೀಕ್ಷೆಗೆ ಅವಕಾಶ (ಜುಲೈ 15, ಆಗಸ್ಟ್ ಮೊದಲ ವಾರ). ಮುಖ್ಯ ವಿಷಯಗಳ ಜೊತೆ ಒಂದು ಭಾಷಾ ವಿಷಯದ ಪರೀಕ್ಷೆ. ಆಯಾ ಶಾಲೆಗಳಲ್ಲೇ ಪರೀಕ್ಷೆ ನಡೆಸಲು ಅವಕಾಶ ನೀಡುವುದು

ರಾಜ್ಯ ಸರ್ಕಾರದ ನಿಲುವು ಏನು?
ಜುಲೈನಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಸರ್ಕಾರ ಒಲವು ವ್ಯಕ್ತಪಡಿಸಿದ್ದು,  ಜುಲೈನಲ್ಲಿ ಪರೀಕ್ಷೆ ನಡೆದರೇ ಆಗಸ್ಟ್ ನಲ್ಲಿ ಫಲಿತಾಂಶ ಪ್ರಕಟಿಸಬಹುದು.  ಇದರಿಂದ ನೀಟ್/ಜೆಇಇ/ಸಿಇಟಿ/ಐಸಿಎಆರ್ ಪರೀಕ್ಷೆಗೆ ಅನುಕೂಲವಾಗಲಿದೆ.  ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನ ಅಗತ್ಯ. ನಾವು ಪರೀಕ್ಷೆ ನಡೆಸಲು ರೆಡಿ ಇದ್ದೇವೆ.

Share This Article
Leave a Comment

Leave a Reply

Your email address will not be published. Required fields are marked *