ಕೆಸಿಎನ್ ಚಂದ್ರು ನಿಧನಕ್ಕೆ ಸಿಎಂ ಬಿಎಸ್‍ವೈ ಸಂತಾಪ

Public TV
1 Min Read

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆಸಿಎನ್ ಚಂದ್ರು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ತಂದೆ ಕೆ.ಸಿ. ನಂಜುಂಡೇಗೌಡ ಅವರಿಂದ ಪ್ರಭಾವಿತರಾಗಿ 50ಕ್ಕೂ ಹೆಚ್ಚು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದ ಅವರು ಹುಲಿಯ ಹಾಲಿನ ಮೇವು, ಬಬ್ರುವಾಹನ ಮುಂತಾದ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿದ್ದರು. ಮೂರು ಅವಧಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದರು. ಸಿನಿಮಾಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದರು. ಇದನ್ನೂ ಓದಿ: ಬಬ್ರುವಾಹನ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ನಿಧನ

ಚಂದ್ರು ನಿಧನದಿಂದ ಅತ್ಯುತ್ತಮ ನಿರ್ಮಾಪಕರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ತಂದೆ ಕೆ.ಸಿ.ಎನ್.ಗೌಡರ ಮಾರ್ಗದರ್ಶನದಲ್ಲಿ ಚಲನಚಿತ್ರ ನಿರ್ಮಾಣ ಪ್ರದರ್ಶನ ಚಿತ್ರ ವಿತರಣೆಯಲ್ಲಿ ಅಪಾರ ಅನುಭವಗಳಿಸಿದ್ದ ಕೆಸಿಎನ್ ಚಂದ್ರು ಅವರು ಬೆಂಗಳೂರಿನ ನವರಂಗ್, ಊರ್ವಶಿ ಮತ್ತು ದೊಡ್ಡಬಳ್ಳಾಪುರದ ರಾಜ್ ಕಮಲ್ ಚಿತ್ರಮಂದಿರದ ಮಾಲೀಕರಾಗಿ ಪ್ರದರ್ಶಕರಾಗಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಚಂದ್ರು ಅವರು ಐವತ್ತಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿದ್ದರು. ದಾರಿ ತಪ್ಪಿದ ಮಗ, ಹುಲಿಯ ಹಾಲಿನ ಮೇವು, ಬಬ್ರುವಾಹನ, ಅಂತ, ಮುಂತಾದ ಶ್ರೀಮಂತ ಚಿತ್ರಗಳನ್ನು ನಿರ್ಮಿಸಿದ್ದರು. ಸುಮಾರು ಐನೂರು ಚಿತ್ರಗಳನ್ನು ವಿತರಣೆ ಮಾಡಿದ್ದರು. ಸೆನ್ಸಾರ್ ಮಂಡಳಿಗೆ ಸದಸ್ಯರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ್ದರು.

ಪನೋರಮಾ ವಿಭಾಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿ ತೀರ್ಪುಗಾರಾಗಿ, ಮುಂಬೈನ ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹಲವಾರು ಬದಲಾವಣೆ ತಂದ ಇವರು ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಆಪ್ತ ವಲಯದಲ್ಲಿ ಇದ್ದರು.

ಶೇಷಾದ್ರಿಪುರದ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಸುಮಾರು ನೂರವೈತ್ತು ವಿದ್ಯಾರ್ಥಿಗಳಿಗೆ ಆಶ್ರಯವಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *