ಕೆ.ಆರ್.ಪೇಟೆ ಲೋಕಲ್ ವಾರ್‌ನಲ್ಲಿ ಬಿಜೆಪಿ ಮೇಲುಗೈ- 30 ವರ್ಷಗಳ ಇತಿಹಾಸ ಬದಲಾಯ್ತು ಎಂದ ನಾರಾಯಣ ಗೌಡ

Public TV
2 Min Read

ಮಂಡ್ಯ: ಕಳೆದ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಜೆಡಿಎಸ್ ಭದ್ರ ಕೋಟೆಯನ್ನು ಛಿದ್ರ ಮಾಡಿದ್ದ ಸಚಿವ ನಾರಾಯಣ ಗೌಡ ಇದೀಗ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಒಂದೇ ಕಲ್ಲಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹೊಡೆದ ನೀಡಿದ್ದಾರೆ. ಈ ಮೂಲಕ ಮುಂದಿನ ಸಾರ್ವತ್ರೀಕ ಚುನಾವಣೆಗೆ ನಾರಾಯಣ ಗೌಡರು ಭದ್ರ ಬುನಾದಿ ಹಾಕಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಇಲ್ಲಿವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಪಾರುಪತ್ಯ ನಡೆದಿತ್ತು. ಆದರೆ ಕೆಆರ್‍ಪೇಟೆ ಉಪಚುನಾವಣೆಯಲ್ಲಿ ಮಂಡ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಮೂಲಕ ನಾರಾಯಣಗೌಡ ಕಮಲ್ ಮಾಡಿದ್ದರು. ಇದೀಗ ಅದೇ ರೀತಿ ತಮ್ಮ ಗೆಲುವಿನ ನಾಗಲೋಟ ಮುಂದುವರಿಸಲು ನಾರಾಯಣ ಗೌಡ ಇದೀಗ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.

 ಕೆಆರ್‌ಪೇಟೆ ಪುರಸಭೆಯಲ್ಲಿ ಬಿಜೆಪಿಯಿಂದ ಓರ್ವ ಅಭ್ಯರ್ಥಿ ಇದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ 14 ಮಂದಿಯನ್ನು ಸೆಳೆದುಕೊಂಡು ತಮ್ಮ ಬೆಂಬಲಿಗ ಅಭ್ಯರ್ಥಿಯನ್ನು ಗೆಲ್ಲಿಸಕೊಳ್ಳುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್‍ಗೆ ಮರ್ಮಾಘಾತ ನೀಡಿದ್ದಾರೆ. ಸದ್ಯ ಪುರಸಭೆಯ ಅಧ್ಯಕ್ಷೆಯಾಗಿರುವ ಮಾದೇವಿ ಜೆಡಿಎಸ್ ಪಕ್ಷದಿಂದ 15ನೇ ವಾರ್ಡ್‍ನಲ್ಲಿ ಗೆಲುವು ಸಾಧಿಸಿದ್ದರು. ಆದರೆ ಇವರು ನಾರಾಯಣ ಗೌಡ ಬೆಂಬಲಿಗರು ಆಗಿರುವ ಕಾರಣ ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

ಚುನಾವಣೆಯಲ್ಲಿ ಪುರಸಭೆಯ ಅಧ್ಯಕ್ಷ ಮೀಸಲಾತಿ ಎಸ್‍ಟಿ ಜನಾಂಗಕ್ಕೆ ಲಭಿಸಿತ್ತು. ಹೀಗಾಗಿ ಅನಿವಾರ್ಯವಾಗಿ ಜೆಡಿಎಸ್ ಪಕ್ಷದವರು ನಾರಾಯಣಗೌಡ ಪರ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಕೆಆರ್‌ಪೇಟೆ ಪುರಸಭೆ 23 ವಾರ್ಡ್ ಹೊಂದಿದ್ದು, ಈ ಪೈಕಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ 1 ಹಾಗೂ ಪಕ್ಷೇತರ 1 ಇತ್ತು. ಹೀಗಿದ್ದರು ಸಹ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಪಡೆಯಲು ಸಾಧ್ಯವಾಗದೇ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾದೇವಿ ಅಧ್ಯಕ್ಷರಾಗಿದ್ದು, ಜೆಡಿಎಸ್ ಅಭ್ಯರ್ಥಿ ಉಪಾಧ್ಯಕ್ಷ ಸ್ಥಾನ ಹಿಡಿದಿದ್ದಾರೆ. ಸದ್ಯ ಮೀಸಲಾತಿ ವಿಚಾರ ನ್ಯಾಯಲಯದಲ್ಲಿ ಇರುವ ಕಾರಣ ಇನ್ನೂ ಸಹ ಅಧಿಕೃತವಾಗಿ ಘೋಷಣೆಯಾಗಿಲ್ಲ. ಒಂದು ತಿಂಗಳ ಬಳಿಕ ಅಧಿಕೃತ ಆದೇಶ ಮಾಡಲಾಗುತ್ತದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುರಸಭೆ ಚುನಾವಣೆ ನಡೆದಿದ್ದು, 30 ವರ್ಷಗಳ ಇತಿಹಾಸ ಈಗ ಬದಲಾಗಿದೆ. ನಮ್ಮ ಅಭ್ಯರ್ಥಿಯೇ ಗೆಲುವು ಪಡೆದಿದ್ದು, ನಗರ ಅಭಿವೃದ್ಧಿ ಆಗಲಿದೆ. ಇಲ್ಲಿ ಉತ್ತಮ ತಂಡವನ್ನು ರಚಿಸಿದ್ದೆವು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎದುರಾಳಿಗಳೇ ಇಲ್ಲ ಕಾರಣ. ಚುನಾವಣೆ ಏಕಮುಖವಾಗಿ ನಡೆದಿದೆ. ನಾನು ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಶುಭ ಕೋರುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *