ಕೆ.ಆರ್.ಪೇಟೆ ಪೇದೆಗೆ ಕೊರೊನಾ- 2 ಠಾಣೆ ಸೀಲ್‍ಡೌನ್

Public TV
1 Min Read

ಮಂಡ್ಯ: ಮಳವಳ್ಳಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಯೊಬ್ಬರಿಗೆ ಕೊರೊನಾ ತಗುಲಿದ ಬೆನ್ನಲ್ಲೇ ಕೆ.ಆರ್.ಪೇಟೆ ಪಟ್ಟಣ ಠಾಣೆಯ ಮುಖ್ಯ ಪೇದೆಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ.

ಕ್ರೈಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆಯು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದ ವೇಳೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಪೇಗೆ ಸೋಂಕು ದೃಢಪಡುತ್ತಿದ್ದಂತೆ ಅವರು ಭೇಟಿ ನೀಡಿದ್ದ ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳನ್ನು ನಾಲ್ಕು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ:  ಮಂಡ್ಯ, ಉಡುಪಿಯಲ್ಲಿ ಕೊರೊನಾ ಸ್ಫೋಟ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ

ಮುಖ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಎರಡೂ ಠಾಣೆಗಳ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಸಂಬಂಧ ಮಾಹಿತಿ ಪಡೆದ ಮಂಡ್ಯ ಎಸ್‍ಪಿ ಪರಶುರಾಮ್ ಅವರು ಕೆ.ಆರ್.ಪೇಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್‍ಪಿ ಪರಶುರಾಮ್ ಅವರು, ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿನ ಮುಖ್ಯ ಪೇದೆಯೊಬ್ಬರಿಗೆ ಕೊರೊನಾ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಕೆ.ಆರ್ ಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಗಳನ್ನ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ಇಲ್ಲಿನ ಪ್ರಕರಣಗಳನ್ನ ಕಿಕ್ಕೇರಿ ಠಾಣೆಯಲ್ಲಿ ದಾಖಲಿಸಲು ಅವಕಾಶ ನೀಡಿದ್ದೇವೆ ಎಂದರು.

ಕ್ವಾರಂಟೈನ್ ಕೇಂದ್ರಗಳಲ್ಲಿ ಭದ್ರತೆಗೆ ಬೇರೆ ತಾಲೂಕಿನ 31 ಜನ ಪೇದೆಗಳು ಕೆಲಸ ನಿರ್ವಹಿಸಲಿದ್ದಾರೆ. ಇಬ್ಬರು ಇನ್ಸ್‍ಪೆಕ್ಟರ್, ಇಬ್ಬರು ಸಬ್ ಇನ್ಸ್‍ಪೆಕ್ಟರ್, ಒಂದು ಕೆಎಸ್‍ಆರ್‍ಪಿ ಹಾಗೂ ಡಿಎಆರ್ ಪಡೆಯನ್ನು ನಿಯೋಜಿಸಲಾಗಿದೆ. ತಾಲೂಕಿನಲ್ಲಿ ಕೋವಿಡ್-19 ಕರ್ತವ್ಯಕ್ಕೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *