ಕೆಲಸ ಕೊಡಿಸುವುದಾಗಿ ನಂಬಿಸಿ ಟೆಕ್ಕಿಗೆ 28 ಲಕ್ಷ ವಂಚನೆ

Public TV
2 Min Read

– ಸೆಕ್ಯೂರಿಟಿ ಗಾರ್ಡ್ ಬ್ಯಾಂಕ್ ಖಾತೆ ಬಳಸಿ ಮೋಸ
– 28 ಲಕ್ಷ ರೂ.ಬಾಂಡ್ ನೀಡುವಂತೆ ಬೇಡಿಕೆ

ನವದೆಹಲಿ: ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳಾ ಎಂಜಿನಿಯರ್‍ಗೆ 28 ಲಕ್ಷ ರೂ.ಗಳನ್ನು ವಂಚಿಸಿರುವ ಆಘಾತಕಾರಿ ಘಟನೆ ನಡೆದಿದೆ.

ನೋಯ್ಡಾದಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷದ ಸೆಕ್ಯೂರಿಟಿ ಗಾರ್ಡ್ ಪಿಂಕೇಶ್ ಕುಮಾರ್‍ನನ್ನು ಬಂಧಿಸಲಾಗಿದ್ದು, ಈತ ನೋಯ್ಡಾದ ವಸತಿ ಸಮುಚ್ಛಯದಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ಕಮಿಷನ್ ನೀಡುವುದಾಗಿ ಹೇಳಿ ಸೆಕ್ಯೂರಿಟಿ ಗಾರ್ಡ್‍ನಿಂದ ವಿವಿಧ ಬ್ಯಾಂಕ್‍ಗಳಲ್ಲಿ ಒತ್ತಾಯಪೂರ್ವಕವಾಗಿ ಖಾತೆ ತೆರೆಸಿದ್ದ. ವ್ಯಕ್ತಿ ತಾನು ಬೇರೆಯವರಿಗೆ ವಂಚಿಸಿದ ಹಣವನ್ನು ಸೆಕ್ಯೂರಿಟಿ ಖಾತೆಗೆ ಹಾಕುತ್ತಿದ್ದ. ನಂತರ ಹಣ ಸಂದಾಯವಾಗುತ್ತಿದ್ದಂತೆ ಎಟಿಎಂಗಳ ಮೂಲಕ ಬಿಡಿಸಿಕೊಳ್ಳುತ್ತಿದ್ದ. ಬಿಡಿಸಿದ ಒಟ್ಟು ಹಣದಲ್ಲಿ ಸೆಕ್ಯೂರಿಟಿ ಕುಮಾರ್‍ಗೆ ಶೇ.10ರಷ್ಟು ಕಮಿಶನ್ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಂಚನೆ ಕುರಿತು ಅರಿವಾಗುತ್ತಿದ್ದಂತೆ ಟೆಕ್ಕಿ ಯುವತಿ ಮಾಳವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಮಹಿಳೆ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಕಂಪನಿಯೊಂದರಲ್ಲಿ ಉಪ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಬೇರೆಡೆ ಕೆಲಸ ಹುಡುಕಲು ಯತ್ನಿಸಿದ್ದಾರೆ.

ವಂಚನೆ ಹೇಗಾಯ್ತು?
ಘಟನೆ ಕುರಿತು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದು, ಜುಲೈ ಮೊದಲ ವಾರದಲ್ಲಿ ಆನ್‍ಲೈನ್ ಜಾಬ್ ಪೋರ್ಟಲ್‍ನಿಂದ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್(ವಿಒಐಪಿ) ಕರೆ ಬಂತು. ವ್ಯಕ್ತಿ ತನ್ನ ಹೆಸರು ರಾಹುಲ್ ಎಂದು ಪರಿಚಯ ಮಾಡಿಕೊಂಡ. ಈ ವೇಳೆ ನಿಮ್ಮ ಸಿವಿ ಡಿಎಲ್‍ಎಫ್ ಲಿಮಿಟೆಡ್‍ಗೆ ಆಯ್ಕೆಯಾಗಿದೆ ಎಂದು ತಿಳಿಸಿದ. ಕೆಲ ದಿನಗಳ ಬಳಿಕ ಮತ್ತೊಂದು ವಿಒಐಪಿ ಕರೆ ಬಂತು, ಈ ವೇಳೆ ಮತ್ತೊಬ್ಬ ವ್ಯಕ್ತಿ ಮಾತನಾಡಿ ಡಿಎಲ್‍ಎಫ್ ಎಚ್‍ಆರ್ ಎಂದು ಪರಿಚಯಿಸಿಕೊಂಡ. ನಂತರ ನೀವು ಹಿರಿಯ ವ್ಯವಸ್ಥಾಪಕಿ ಹುದ್ದೆಗೆ ಆಯ್ಕೆಯಾಗಿದ್ದೀರಿ. ಉತ್ತಮ ಪ್ಯಾಕೇಜ್ ಸಹ ನೀಡಲಾಗುವುದು ಎಂದು ಹೇಳಿದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಹೀಗೆ ಮಾತನಾಡುತ್ತ 28 ಲಕ್ಷ ರೂ.ಗಳ ಬಾಂಡ್ ನೀಡುವಂತೆ ಕೇಳಿದ್ದಾನೆ. ಮೊದಲ ಹಂತದಲ್ಲಿ 6.8 ಲಕ್ಷ ರೂ. ಠೇವಣಿ ಇಡುವಂತೆ ಹೇಳಿದ್ದಾನೆ. ಹೀಗೆ ಮಾಡಿ ಮಹಿಳಾ ಎಂಜಿನಿಯರಿಂದ ವಿವಿಧ ಬ್ಯಾಂಕ್‍ಗಳ ಖಾತೆಗೆ 28 ಲಕ್ಷ ರೂ.ಗಳನ್ನು ಡೆಪಾಸಿಟ್ ಮಾಡಿಸಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಇದೀಗ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಬ್ಯಾಂಕ್ ಖಾತೆಯ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಅಲ್ಲದೆ ಕರೆ ಮಾಡಿದ ನಂಬರ್‍ಗಳನ್ನೂ ಟ್ರೇಸ್ ಮಾಡಲಾಗುತ್ತಿದೆ ಎಂದು ನೋಯ್ಡಾ ದಕ್ಷಿಣ ವಿಭಾಗದ ಡಿಸಿಪಿ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

ಟೆಕ್ನಿಕಲ್ ಅನಾಲಿಸಿಸ್ ಸಹಾಯದಿಂದ ಕರೆ ಮಾಡಿದ ವಿವರಗಳು ಹಾಗೂ ಸ್ಥಳೀಯ ಮೂಲಗಳ ಮಾಹಿತಿ ಮೇರೆಗೆ ನೊಯ್ಡಾ ಸೆಕ್ಟರ್ 122ನ ಖಂಜರ್‍ಪುರದ ಬಳಿ ಕುಮಾರ್‍ನನ್ನು ಬಂಧಿಸಲಾಗಿದೆ. ಆದರೆ ಕುಮಾರ್ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿಲ್ಲ. ಪ್ರಮುಖ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಠಾಕೂರ್ ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *