ಕೆಫೆ ಮಾಲೀಕನ ಕಿಡ್ನಾಪ್ – 26 ಲಕ್ಷ, ಆಡಿ ಕಾರು, ಚಿನ್ನ ಸುಲಿಗೆಗೈದ ಆರೋಪಿಗಳು ಅಂದರ್

Public TV
3 Min Read

            ಶರತ್ ಕುಮಾರ್                                                     ರಾಜ್ ಕಿರಣ್

ಬೆಂಗಳೂರು: ಕೆಫೆ ಮಾಲೀಕನನ್ನ ಕಿಡ್ನಾಪ್ ಮಾಡಿ 26 ಲಕ್ಷ ಹಣ ಮತ್ತು ಆಡಿ ಕಾರು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಂತೆ ಹೈಗ್ರೌಂಡ್ಸ್ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 88 ಲಕ್ಷದ ಐಷಾರಾಮಿ ಬೆಂಜ್ ಕಾರು ಇದೀಗ ಕೆಲಸಕ್ಕೆ ಬಾರದ ವಸ್ತು!

ಕೆಫೆ ಮಾಲೀಕ ಅಭಿನವ್ ಸಿಂಘಾಲ್ ಅವರನ್ನು ಆರೋಪಿಗಳು ಅಪಹರಿಸಿದ್ದರು. 9 ಜನ ದುಷ್ಕರ್ಮಿಗಳು ಮೇ 13 ರಂದು ನ್ಯೂ ಬಿಇಎಲ್ ರಸ್ತೆಯಲ್ಲಿ ಅಭಿನವ್ ಸಿಂಗಾಲ್ ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿ ಅವರನ್ನು ಬನ್ನೇರುಘಟ್ಟ ರಸ್ತೆಯ ಗೋದಾಮಿನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಬಳಿಕ ಆಡಿ ಕಾರು, ಚಿನ್ನಾಭರಣ, 26 ಲಕ್ಷ ಹಣವನ್ನು ಕಿತ್ತುಕೊಂಡಿದ್ದರು. ಅಲ್ಲದೇ ಬೆದರಿಕೆವೊಡ್ಡಿ ಕಳುಹಿಸಿದ್ದರು.

ಅಭಿನವ್ ಸಿಂಘಾಲ್

ಮೊದಲು ಈ ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಆದರೆ ಈ ಪ್ರಕರಣವನ್ನು ಸದಾಶಿವನಗರ ಠಾಣೆಯಿಂದ ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪೊಲೀಸರು ಆರೋಪಿಗಳನ್ನು ಕರೆತಂದು ಬಿಟ್ಟು ಕಳುಹಿಸಿದ್ದಾರೆ ಎಂದು ಅಭಿನವ್ ಸಿಂಘಾಲ್ ಆರೋಪಿಸಿ ಸದಾಶಿವನಗರ ಪೊಲೀಸರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.

ಸದಾಶಿವನಗರ ಪೊಲೀಸ್ ಸಿಬ್ಬಂದಿ ವಿರುದ್ಧ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ಹೈಗ್ರೌಂಡ್ಸ್ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಿ ವರದಿ ನೀಡುವಂತೆ ಆದೇಶ ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶರತ್ ಕುಮಾರ್, ರಾಜ್ ಕಿರಣ್, ಹೇಮಂತ್, ವಾಸೀಂ, ಲೋಕೇಶ್, ಅರುಣ್ ಕುಮಾರ್, ಥಾಮಸ್, ಡ್ಯಾನಿಯಲ್ ಎಂದು ಗುರುತಿಸಲಾಗಿದೆ.

ಅರುಣ್ ಕುಮಾರ್

ದೂರಿನಲ್ಲಿ ಏನಿತ್ತು?
ಆರೋಪಿ ಶರತ್‍ಕುಮಾರ್ ಕೆಫೆ ರೆಸ್ಟೋರೆಂಟ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ. ಈತನೇ ಆರೋಪಿಗಳನ್ನು ತನ್ನ ಸ್ನೇಹಿತರೆಂದು ನನಗೆ ಪರಿಯಚ ಮಾಡಿಸಿದ್ದನು. ಇವರೇ ಒಂದು ದಿನ ಹೇಮಂತ್ ಮತ್ತು ಡ್ಯಾನಿಯಲ್ ಇದ್ದ ಕಾರಿಗೆ ಆಡಿ ಕಾರ್ ಮೂಲಕ ಅಪಘಾತ ಮಾಡಿಸಿದರು. ನಂತರ ಕಾರನ್ನು ವಿಲ್ಸನ್ ಗಾರ್ಡನ್‍ನಲ್ಲಿದ್ದ ಥಾಮಸ್‍ನ ಜೋಸೆಫ್ ಆಟೋ ಗ್ಯಾರೇಜ್‍ಗೆ ರಿಪೇರಿಗೆ ತೆಗೆದುಕೊಂಡು ಹೋದರು. 13 ರಂದು ರಾಜ್ ಕಿರಣ್ ಮತ್ತು ಆತನ ಇಬ್ಬರು ಸ್ನೇಹಿತರು ನನ್ನನ್ನ ಗ್ಯಾರೇಜಿಗೆ ಕರೆದುಕೊಡು ಹೋಗುತ್ತೇನೆ ಎಂದು ಹೇಳಿ ಬನ್ನೇರುಘಟ್ಟ ಕಾಡಿನ ಮಧ್ಯೆ ಇರುವ ಗೋಡಾನ್‍ಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಮೇಲೆ ಹಲ್ಲೆ ಮಾಡಿ, ನಂತರ ನನ್ನ ಬ್ಯಾಗಿನಲ್ಲಿದ್ದ ಚೆಕ್ ಬುಕ್, ರೆಸ್ಟೋರೆಂಟ್, ಕಾರಿಗೆ ಸಂಬಂಧಿಸಿದ ದಾಖಲಾತಿಗಳಿಗೆ ಸಹಿ ಮಾಡಿಸಿಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಚಾಕು, ಕತ್ತಿ ತೋರಿಸಿ ನಾವು ಹೇಳಿದಂತೆ ಕೇಳಬೇಕು ಎಂದು ಬೆದರಿಸಿ ಜಯನಗರದ ಬ್ಯಾಂಕ್‍ಗೆ ಕಾರಿನಲ್ಲಿ ಕರೆದುಕೊಂಡು ಹೋದರು. ನಂತರ 2 ಚೆಕ್‍ಗಳ ಮೂಲಕ 9 ಲಕ್ಷ ಹಣವನ್ನು ಡ್ರಾ ಮಾಡಿಕೊಂಡರು. ನಂತರ ಬೆಂಗಳೂರಿನ ವಿವಿಧ ಜಾಗಗಳಲ್ಲಿ ನನ್ನ ಕೂಡಿ ಹಾಕಿದರು. ಅಲ್ಲದೇ ಚಿನ್ನದ ಸರ, ಉಂಗುರ, ಕಿತ್ತುಕೊಂಡರು. ಬಳಿಕ ಎಟಿಎಂ ಮೂಲಕ 55 ಸಾವಿರ ಮತ್ತು ಪರ್ಸ್ ನಲ್ಲಿದ್ದ 37 ಸಾವಿರ ಹಣವನ್ನು ಕಿತ್ತುಕೊಂಡರು. ಮತ್ತೆ 16 ಲಕ್ಷ ರೂಪಾಯಿಯನ್ನು ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡರು. ಕೊನೆಯಲ್ಲಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿಮ್ಮ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಸಿ ಹೆಬ್ಬಾಳದ ಬಳಿ ಬಿಟ್ಟು ಪರಾರಿಯಾದರು ಎಂದು ಅಭಿನವ್ ಸಿಂಘಾಲ್ ದೂರು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *