ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.
ಸದ್ಯ ಡಿಕೆಶಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿರುವ ಸದಾಶಿವನಗರ ನಿವಾಸಕ್ಕೆ ಸ್ಯಾನಿಟೈಜ್ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ.
ಮನೆಯ ಎದುರು ಕೊರೊನಾ ಪಾಸಿಟಿವ್ ಎಂದು ಸ್ಟಿಕರ್ ಹಾಕಲಾಗುತ್ತದೆ. ಕುಟುಂಬಸ್ಥರನ್ನು ಪ್ರಾಥಮಿಕ, ಕೆಲಸದವರನ್ನ ದ್ವಿತೀಯ ಸಂಪರ್ಕ ಎಂದು ಪರಿಗಣನೆ ಮಾಡಿ ನಿವಾಸದವರಿಗೆಲ್ಲ ಕೊರೊನಾ ರ‍್ಯಾಪಿಡ್ ಟೆಸ್ಟ್ ಮಾಡಿಸಲು ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ ಸೂಚನೆ ನೀಡಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೂ ಕೊರೊನಾ ಸೋಂಕು ಬಂದಿತ್ತು. ಯಡಿಯೂರಪ್ಪ, ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರೆ ಶ್ರೀರಾಮುಲು ಸರ್ಕಾರಿ ಬೌರಿಂಗ್ ಆಸ್ಪತ್ರಗೆ ದಾಖಲಾಗಿದ್ದರು. ಈಗ ಎಲ್ಲರೂ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಡಿಕೆಶಿ ಅವರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರಿಗೆ ಅವಾಜ್ ಹಾಕಿದ್ದರು. ನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಡಿಕೆಶಿ, ಮಿಸ್ಟರ್ ಪೊಲೀಸ್ ಕಮಿಷನರ್ ಅವರೇ ಬೀ ಕೇರ್ ಫುಲ್. ನೀವು ಬಿಜೆಪಿ ಏಜೆಂಟ್ ಆಗಿ ವರ್ತಿಸುತ್ತಿದ್ದೀರಿ ಎಂದು ಕಿಡಿಕಾರಿದ್ದರು.