ಕೆಎಸ್‌ಆರ್‌ಟಿಸಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತ- ಫುಲ್ ಸ್ಯಾನಿಟೈಸೇಶನ್

Public TV
3 Min Read

ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆಯ ಪರಿಣಾಮ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಈ ಹಿನ್ನೆಲೆ ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಮಾದರಿಯ ಬಸ್‍ಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

ಈ ಹಿಂದೆ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಮುಂತಾದ ರಾಜ್ಯಗಳಿಗೆ ವೋಲ್ವೋ, ಸ್ಲೀಪರ್, ರಾಜಹಂಸ ಮತ್ತು ವೇಗದೂತ ಸಾರಿಗೆಗಳು ಸೇರಿ 65 ಬಸ್‍ಗಳು ಸಂಚರಿಸುತ್ತಿದ್ದವು. ಹುಬ್ಬಳ್ಳಿಯಿಂದ ನಿತ್ಯ 24 ವೇಗದೂತ, 2 ರಾಜಹಂಸ, 8 ಎಸಿ ಸ್ಲೀಪರ್ ಮತ್ತು 4 ಐರಾವತ ವೋಲ್ವೋ ಬಸ್ ಗಳು ಸಂಚರಿಸುತ್ತಿದ್ದವು. ಈ ಬಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಿದ್ದರು. ಸಂಸ್ಥೆಗೆ ಅತ್ಯಧಿಕ ಸಾರಿಗೆ ಆದಾಯ ಬರುತ್ತಿತ್ತು. ಕೋವಿಡ್ ತೀವ್ರತೆ ಕಾರಣಕ್ಕಾಗಿ ಈಗಾಗಲೇ ಮುಂಬೈಗೆ ಹೋಗುತ್ತಿದ್ದ ಎಸಿ ಸ್ಲೀಪರ್ ಹಾಗೂ ಪಿಂಪ್ರಿ ಮತ್ತು ಶಿರಡಿಗೆ ಹೋಗುತ್ತಿದ್ದ ಐರಾವತ ಬಸ್ ಗಳನ್ನು ಈ ಹಿಂದೆಯೇ ರದ್ದುಗೊಳಿಸಲಾಗಿತ್ತು ಎಂದು ವಿವರಿಸಿದರು.

ಇದೀಗ ಪಿಂಪ್ರಿಗೆ ಹೋಗುವ ಎರಡು ಸ್ಲೀಪರ್, ಶಿರಡಿಯ ಒಂದು ಸ್ಲೀಪರ್ ಮತ್ತು ಸೊಲ್ಲಾಪುರಕ್ಕೆ ಹೋಗುವ ರಾಜಹಂಸ ಬಸ್ ಗಳನ್ನು ರದ್ದುಗೊಳಿಸಲಾಗಿದೆ. ಇವುಗಳೊಂದಿಗೆ ಸೊಲ್ಲಾಪುರ, ಔರಂಗಬಾದ್, ಮೀರಜ್, ಈಚಲಕರಂಜಿ, ಮುಂಬೈ, ಫಂಡರಾಪುರ, ನಿಗದಿ, ಪುಣೆ, ಬಾರ್ಸಿ ಮತ್ತಿತರ ಸ್ಥಳಗಳಿಗೆ ಸಂಚರಿಸುತ್ತಿದ್ದ 24 ವೆಗದೂತ ಬಸ್ ಗಳ ಸಂಚಾರವನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಸ್, ನಿಲ್ದಾಣಗಳಲ್ಲಿ ಸ್ಯಾನಿಟೇಷನ್
ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ, ಬಸ್ ಡಿಪೋಗಳು, ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಬಸ್ ನಿಲ್ದಾಣ ಸೇರಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ರವಿವಾರ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಿಂದ ಸ್ಯಾನಿಟೈಸೇಷನ್ ಮಾಡಲಾಯಿತು.

ಕೋವಿಡ್ ಎರಡನೇ ಅಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನಗಳ ಪ್ರಕಾರ ಸಾರಿಗೆ ಸಂಸ್ಥೆಯಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಬಸ್‍ಗಳನ್ನು ನಿತ್ಯ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಬಸ್‍ಗಳಲ್ಲಿ ಆಸನಗಳ ಸಂಖ್ಯೆಯ ಶೇ.50ರಷ್ಟು ಜನರು ಮಾತ್ರ ಪ್ರಯಾಣಿಸಲು ಅನುಮತಿಸಲಾಗುತ್ತದೆ. ಕೋವಿಡ್ ನಿಯಮಾವಳಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಮನವಿ ಮಾಡಿದ್ದಾರೆ.

ಟಿಕೆಟ್ ನಲ್ಲಿ ಕೊರೊನಾ ಜಾಗೃತಿ
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರಿಗೆ ಬಸ್ ಗಳ ಟಿಕೆಟ್‍ನಲ್ಲಿ ‘ಕೊರೊನಾದಿಂದ ರಕ್ಷಿಸಿಕೊಳ್ಳಲು ತಪ್ಪದೆ ಮಾಸ್ಕ್ ಧರಿಸಿರಿ’, ‘ಬಸ್ ಮತ್ತು ಬಸ್ ನಿಲ್ದಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ’, ‘ನಿಮ್ಮ ಸುರಕ್ಷತೆಗಾಗಿ ಸ್ಯಾನಿಟೈಸರ್ ಬಳಸಿರಿ’ ಸೇರಿದಂತೆ ಮುಂತಾದ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ಬಸ್‍ಗಳು ಸಂಚರಿಸುತ್ತಿವೆ. ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಪ್ರಯಾಣಿಕರಿಗೆ ನೀಡುವ ಬಸ್ ಟಿಕೆಟ್ ಗಳಲ್ಲಿ ಕೊರೊನಾ ಜಾಗೃತಿ ಸಂದೇಶಗಳನ್ನು ಮುದ್ರಿಸಿದರೆ ಸುಲಭವಾಗಿ ಪ್ರತಿದಿನ ಹೆಚ್ಚಿನ ಜನರಿಗೆ ತಲುಪಿಸಬಹುದು. ಪ್ರತಿಯೊಬ್ಬರೂ ಟಿಕೆಟ್ ಪಡೆದ ಮರುಕ್ಷಣವೆ ಈ ಸಂದೇಶಗಳನ್ನು ಗಮನಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬ ಅಭಿಪ್ರಾಯದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ರಾಮನಗೌಡರ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *