ಬೆಂಗಳೂರು: ನಾಳೆ ಕೃಷ್ಣಾಜನ್ಮಾಷ್ಟಮಿ ಹಬ್ಬವಾಗಿದ್ದು, ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಆನ್ ಲೈನ್ ಮೂಲಕವೇ ದೇವರ ದರ್ಶನ ಹಾಗೂ ಕಷ್ಣನ ಆರಾಧನೆ ನಡೆಯಲಿದೆ.
ಈ ಸಂಬಂಧ ಇಸ್ಕಾನ್ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ನರಹರಿ ಚೈತನ್ಯದಾಸ್ ಮಾತನಾಡಿ, ಕೊರೊನಾ ಭೀತಿಯಿಂದ ಇಸ್ಕಾನ್ ಸೇರಿದಂತೆ ಅನೇಕ ಕೃಷ್ಣನ ದೇಗುಲದಲ್ಲಿ ಆನ್‍ಲೈನ್‍ನಲ್ಲಿಯೇ ಪೂಜೆಗಳ ಲೈವ್ ದರ್ಶನ ಇರಲಿದೆ. ನಾಳೆ ದೇಗುಲಗಳು ಭಕ್ತರಿಂದ ತುಂಬಿ ತುಳುಕುವ ಸಾಧ್ಯತೆ ಇರುವುದರಿಂದ ಜನರಿಗೆ ಆನ್‍ಲೈನ್ ಪೂಜೆಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮಂಗಳವಾರ ಹಾಗೂ ಬುಧವಾರ ಕೃಷ್ಣಾಷ್ಟಮಿ ಪೂಜೆ ನಡೆಯಲಿದ್ದು, 20 ಗಂಟೆಗಳ ಕಾಲ ನಿರಂತರ ಆನ್‍ಲೈನ್‍ನಲ್ಲಿ ಪೂಜೆ ವೀಕ್ಷಿಸಬಹುದು. ತೆಪ್ಪೋತ್ಸವ, ಪಂಚಗವ್ಯ ಅಭಿಷೇಕ, ಉಯ್ಯಾಲೆ ಸೇವೆಯನ್ನು ಆನ್‍ಲೈನ್‍ನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.