ಕೃತಘ್ನಗೇಡಿತನದ ಸಿದ್ದರಾಮಯ್ಯರಿಂದ ಸ್ವಾಭಿಮಾನದ ಪಾಠ ಬೇಕಿಲ್ಲ: ಹೆಚ್‍ಡಿಕೆ

Public TV
2 Min Read

ಬೆಂಗಳೂರು: ಜೆಡಿಎಸ್ ಅವಕಾಶವಾದಿ ಪಕ್ಷ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದು, ಕೃತಘ್ನಗೇಡಿತನದ ಸಿದ್ದರಾಮಯ್ಯರಿಂದ ಸ್ವಾಭಿಮಾನದ ಪಾಠ ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇಂದು ಸಾಲು ಸಾಲು ಟ್ವೀಟ್ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್: ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್‍ಗೆ ಜಿಗಿದ ಸಿದ್ದರಾಮಯ್ಯ ಅವರು ‘ಜೆಡಿಎಸ್ ಅವಕಾಶವಾದಿ ಪಕ್ಷ’ ಎನ್ನುವ ಮೂಲಕ ತಮ್ಮ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲು ಮಾಡಿಕೊಂಡಿದ್ದಾರೆ.

ಜೆಡಿಎಸ್ ಪಕ್ಷದಲ್ಲಿದ್ದಾಗ ಅಧಿಕಾರ, ಸ್ಥಾನ-ಮಾನಗಳನ್ನು ಅನುಭವಿಸಿ ತಮ್ಮ ಬೆಂಬಲಿಗರೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಅಧಿಕಾರದ ಆಸೆಗಾಗಿ, ಅವಕಾಶವಾದಿ ಹಾದಿ ಹಿಡಿದ ಕೃತಘ್ನಗೇಡಿತನದ ಸಿದ್ದರಾಮಯ್ಯ ಅವರಿಂದ ನಮ್ಮ ಪಕ್ಷ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ. ನಿಮ್ಮ ಸ್ವಾಭಿಮಾನದ ಪ್ರಲಾಪ ಮಠದೊಳಗಿನ ಬೆಕ್ಕಿನ ಮುಖವಾಡದಂತಿದೆ.

ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದಾಗಲೇ ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಬೇಕು. ಇದನ್ನು ಬುಡಸಹಿತ ಕಿತ್ತೊಗೆಯಬೇಕು ಎಂದು ಬಹಿರಂಗವಾಗಿ ಅಂತರಂಗದ ಮಾತನ್ನು ಉದ್ಗರಿಸಿದ್ದ ನೀವು ಎಂತಹ ಸ್ವಾರ್ಥಿ ಮತ್ತು ಎಡಬಿಡಂಗಿತನದ ರಾಜಕಾರಣಿ ಎಂಬುದು ಇಡೀ ನಾಡಿಗೆ ಗೊತ್ತಿದೆ.

ಅಧಿಕಾರದ ನಿರ್ಮೋಹ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ ಬಂದರು. ಅಧಿಕಾರ ಉಳಿಸಿಕೊಳ್ಳಬೇಕೆಂದಿದ್ದರೆ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು. ದೇವೇಗೌಡರ ಈ ಸ್ವಾಭಿಮಾನಿ ರಾಜಕಾರಣವನ್ನು ಇಷ್ಟು ಬೇಗ ಮರೆತು ಬಿಟ್ಟಿರಾ? ಆತ್ಮವಂಚನೆಯ ರಾಜಕಾರಣಿಯಿಂದ ಜೆಡಿಎಸ್ ಕಲಿಯುವುದು ಏನೇನೂ ಇಲ್ಲ. ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನರ ಕಷ್ಟಕಾರ್ಪಣ್ಯಗಳು, ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ಅಧಿಕಾರದ ಮದ ಮತ್ತು ದುರಹಂಕಾರವನ್ನು ಎಂದೂ ಪ್ರದರ್ಶನ ಮಾಡಿಲ್ಲ. ಅಧಿಕಾರದ ಅಲ್ಪಾವಧಿಯಲ್ಲೂ ಜನಕಲ್ಯಾಣ ಪಕ್ಷದ ಹೆಗ್ಗುರುತಾಗಿತ್ತು.

ಪಕ್ಷಾಂತರ ಮಾಡಿ ಅಧಿಕಾರ ಹಿಡಿದ ನೀವು ಆ ಪಕ್ಷದಲ್ಲಿ ಬಿತ್ತಿದ ಬೆಳೆ ಮತ್ತು ಕಳೆ ಏನೆಂಬುದನ್ನು ನಿಮ್ಮನ್ನು ಆಲಿಂಗಿಸಿಕೊಂಡ ಪಕ್ಷದವರು ಈಗ ಅನುಭವಿಸುತ್ತಿದ್ದಾರೆ. ನಿಮ್ಮ ಸ್ವಾರ್ಥ ರಾಜಕಾರಣದ ಕುಟಿಲ ತಂತ್ರಗಳನ್ನು ಮರೆಮಾಚಿಕೊಳ್ಳಲು ಬೆಳೆದ ಪಕ್ಷಕ್ಕೆ ಮಗ್ಗುಲಲ್ಲಿ ಇದ್ದು ಬಾಕು ಹಾಕಿದವರ ಮಾರ್ಜಾಲ ಉಪದೇಶ ಯಾರಿಗೆ ಸಹ್ಯವಾದೀತು? ತನುವಿನೊಳು ಕಪಟ, ಮನದೊಳು ಮರ್ಕಟ, ಆಚಾರ ಲಿಂಗವ ಭಂಗಗೊಳಿಸಿ, ಸಂಗ ಕೇಳಿಯ ಮನದ, ಮುಂದಣ ಆಸೆಯ ಮತಿಗೇಡಿ, ನೀನು ಶರಣನೆಂದು ಕೊಂಡೊಡೆ ಲಿಂಗ – ಜಂಗಮ ಕೂಡಲ ಸಂಗನು ಮುನಿದುತಲೆ ಹೋಳಾದೀತು.

ಸಿದ್ದರಾಮಯ್ಯ ಹೇಳಿದ್ದೇನು?: ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ತೊರಿದಿದ್ದ ಮಾಜಿ ಎಂಎಲ್‍ಸಿ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ್ದ ಸಿದ್ದರಾಮಯ್ಯನವರು, ಜೆಡಿಎಸ್ ಅವಕಾಶವಾದಿ ಪಕ್ಷ. ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವರು ಕಾಂಗ್ರೆಸ್ ನಲ್ಲಿದ್ದು ಹೋದವರು. ಅಂದು ತಾಲೂಕು ಮಂಡಳಿ ಸದಸ್ಯರಾಗಿದ್ದ ದೇವೇಗೌಡರಿಗೆ ಟಿಕೆಟ್ ಸಿಗದಕ್ಕೆ ಹೊಸ ಪಕ್ಷ ಕಟ್ಟಿದ್ದರು.

ಕಾಂಗ್ರೆಸ್ ಪಕ್ಷ ರಾಜಕೀಯಕ್ಕಷ್ಟೇ ಸೀಮಿತವಲ್ಲ, ಇದೊಂದು ಚಳವಳಿ. ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಗೊಂಡ ಕಾಂಗ್ರೆಸ್ ಎಂಬ ಚಳವಳಿ ಇಂದು ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆಯ ಸ್ಥಾಪನೆಗಾಗಿ ನಿರಂತರವಾಗಿದೆ. ಈ ಸಿದ್ಧಾಂತಗಳನ್ನು ಬೆಂಬಲಿಸುವ ಎಲ್ಲಾ ಮನಸ್ಸುಗಳು ಈ ವೇಳೆ ಒಂದಾಗಬೇಕು.

ದೇಶದ ಇತರ ಎಲ್ಲಾ ರಾಜಕೀಯ ಪಕ್ಷಗಳಿಗೂ ಕಾಂಗ್ರೆಸ್ ಮಾತೃಪಕ್ಷ. ಅದು ರಾಷ್ಟ್ರೀಯ ಪಕ್ಷವೇ ಆಗಿರಲಿ ಅಥವಾ ಪ್ರಾದೇಶಿಕ ಪಕ್ಷಗಳೇ ಆಗಿರಲಿ. ಅವು ಒಂದಲ್ಲಾ ಒಂದು ರೀತಿ ಕಾಂಗ್ರೆಸ್ ಪಕ್ಷದ ಮೂಲದಿಂದಲೇ ಅಸ್ತಿತ್ವಕ್ಕೆ ಬಂದಿವೆ. ಹಾಗಾಗಿಯೇ ದೇಶದ ಉದ್ದಗಲಕ್ಕೂ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷವೆಂಬ ಹೆಗ್ಗಳಿಕೆ ನಮಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *