ಕುವೆಂಪು ವಿವಿಗೆ ದೇಶದಲ್ಲೇ 73ನೇ ರ‌್ಯಾಂಕ್- ರಾಜ್ಯಗಳ ಸಾಂಪ್ರದಾಯಿಕ ವಿವಿಗಳಲ್ಲಿ 3ನೇ ಸ್ಥಾನ

Public TV
2 Min Read

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ದೇಶದಲ್ಲೇ 73ನೇ ರ‌್ಯಾಂಕ್ ಪಡೆದಿದ್ದು, ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಮೂರನೇ ಸ್ಥಾನ ಪಡೆದಿದೆ.

ನವ ದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇಂದು 2020ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (ಎನ್‍ಐಆರ್‍ಎಫ್) ಬಿಡುಗಡೆಗೊಳಿಸಿದ್ದು, 1.85 ಅಂಕ ವೃದ್ಧಿಸಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯವು 73ನೇ ರ್ಯಾಂಕ್ ಪಡೆದು, ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಮೂರನೇ ಸ್ಥಾನ ಪಡೆದಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲ ನಡೆಸುವ ದೇಶದ ಶೈಕ್ಷಣಿಕ ಸಂಸ್ಥೆಗಳ ಶ್ರೇಷ್ಠತಾ ಶ್ರೇಯಾಂಕದಲ್ಲಿ 4,100ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. ಈ ಪಟ್ಟಿಯಲ್ಲಿ ಕುವೆಂಪು ವಿ.ವಿ. 42.45 (ಕಳೆದ ಬಾರಿಗಿಂತ 1.85 ಹೆಚ್ಚಳ)ಅಂಕಗಳನ್ನು ಪಡೆಯುವ ಮೂಲಕ ದೇಶದ ವಿಶ್ವವಿದ್ಯಾಲಯಗಳಲ್ಲಿಯೇ 73ನೇ ಸ್ಥಾನ ಪಡೆದಿದೆ. 2017ರಲ್ಲಿ 150 ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರೀ ಜಿಗಿತ ಕಂಡು 78ನೇ ಸ್ಥಾನಕ್ಕೇರಿತ್ತು. 2019ರಲ್ಲಿ ಮತ್ತೆ ಐದು ಸ್ಥಾನ ಮೇಲೆರಿದ್ದು 73ನೇ ಸ್ಥಾನ ಪಡೆದಿತ್ತು. ಪ್ರಸಕ್ತ ಸಾಲಿನಲ್ಲಿ 1.85 ಅಂಕ ವೃದ್ಧಿಸಿಕೊಂಡಿದ್ದು, ಸ್ಥಿರತೆ ಕಾಯ್ದುಕೊಂಡಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರ ಸರ್ಕಾರದ ಉನ್ನತ ಶೈಕ್ಷಣಿಕ ಸಂಸ್ಥೆಗಳು, ಎಂಜಿನಿಯರಿಂಗ್‍ನಂತಹ ವೃತ್ತಿಪರ ಕೋರ್ಸ್‍ಗಳನ್ನು ನಡೆಸುವ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶಾದ್ಯಂತ 4,100 ಶಿಕ್ಷಣ ಸಂಸ್ಥೆಗಳು ಈ ರ‍್ಯಾಂಕಿಂಗ್ ನಲ್ಲಿ ಭಾಗವಹಿಸಿವೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕ್ರಮವಾಗಿ 27 ಮತ್ತು 68 ನೇ ರ್ಯಾಂಕ್ ಪಡೆದಿವೆ.

ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟ ವೃದ್ಧಿಸಲು ಮತ್ತು ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎನ್‍ಐಆರೆಫ್ ರ‍್ಯಾಂಕಿಂಗ್ ಪ್ರಾರಂಭಿಸಿದೆ. ಈಗ ಐದನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಎಂಜಿನಿಯರಿಂಗ್, ಮ್ಯಾನೇಜ್‍ಮೆಂಟ್, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು ವಿಷಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆ ವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನು ಎನ್‍ಐಆರೆಫ್ ಅಡಿಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತದೆ.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಈ ಕುರಿತು ಪ್ರತಿಕ್ರಿಯಿಸಿ, ಕೋವಿಡ್-19 ನಂತಹ ಮಹಾಮಾರಿಯು ದೇಶದ ಶೈಕ್ಷಣಿಕ ರಂಗವನ್ನು ತೀವ್ರವಾಗಿ ಭಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿಯೂ ವಿಶ್ವವಿದ್ಯಾಲಯದ ಅಧ್ಯಾಪಕರು ಗುಣಮಟ್ಟದ ಸಂಶೋಧನಾ ಚಟುವಟಿಕೆಗಳನ್ನು ಮುಂದುವರಿಸಿರುವುದರಿಂದ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರ್ಯಾಂಕಿಂಗ್ ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ.

ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ಪ್ರತಿಕ್ರಿಯಿಸಿ, `ರಾಜ್ಯ ಮತ್ತು ರಾಷ್ಟ್ರದ ಖ್ಯಾತ ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಜೊತೆ ಸ್ಪರ್ಧಿಸಿ ಸರ್ಕಾರಿ ಸಂಯೋಜಿತ ವಿಶ್ವವಿದ್ಯಾಲಯ ಉನ್ನತ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *