ಕುತೂಹಲ ಹುಟ್ಟಿಸೋ ತಿರುವುಗಳು, ರೋಚಕ ಸಂಗತಿಗಳು: ಪ್ರೇಕ್ಷಕರಿಗೆ ಥ್ರಿಲ್ ನೀಡಿದ ‘ಕೃಷ್ಣ ಟಾಕೀಸ್’

Public TV
2 Min Read

ರೇಟಿಂಗ್: 3.5/5

ಚಿತ್ರ: ಕೃಷ್ಣ ಟಾಕೀಸ್
ನಿರ್ದೇಶನ: ವಿಜಯಾನಂದ್
ನಿರ್ಮಾಪಕ: ಗೋವಿಂದರಾಜು. ಎ.ಹೆಚ್ ಆಲೂರು
ಸಂಗೀತ ನಿರ್ದೇಶನ: ವಿ. ಶ್ರೀಧರ್ ಸಂಭ್ರಮ್
ಛಾಯಾಗ್ರಹಣ: ಅಭಿಷೇಕ್ ಜಿ ಕಾಸರಗೋಡು
ತಾರಾಬಳಗ: ಅಜಯ್ ರಾವ್, ಅಪೂರ್ವ, ಸಿಂಧು ಲೋಕನಾಥ್, ಮಂಡ್ಯ ರಮೇಶ್, ನಿರಂತ್, ಚಿಕ್ಕಣ್ಣ, ಪ್ರಕಾಶ್ ತುಮಿನಾಡು, ಇತರರು

ಜಯ್ ರಾವ್ ನಟನೆಯ ವಿಜಯಾನಂದ್ ನಿರ್ದೇಶನದ ಕೃಷ್ಣ ಟಾಕೀಸ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕ ಪ್ರಭುಗಳ ಮೆಚ್ಚುಗೆಗೆ ಸಿನಿಮಾ ಪಾತ್ರವಾಗಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ನಿರ್ದೇಶಕರು ಈ ಸಿನಿಮಾ ಮಾಡಿದ್ದು, ಲಖನೌದ ಚಿತ್ರಮಂದಿರದಲ್ಲಿ ನಡೆದ ಘಟನೆ ಈ ಸಿನಿಮಾದ ಕಥಾವಸ್ತು. ಅಜಯ್ ರಾವ್ ಅವರದ್ದು ಚಿತ್ರದಲ್ಲಿ ಪತ್ರಕರ್ತನ ಪಾತ್ರ. ಈ ಹಿಂದಿನ ಕೃಷ್ಣ ಸೀರೀಸ್ ನಾಲ್ಕು ಸಿನಿಮಾಗಳಲ್ಲಿ ಲವರ್ ಬಾಯ್ ಇಮೇಜಾದ್ರೆ ಇಲ್ಲಿ ಸೀರಿಯಸ್ ರೋಲ್. ಮೊದಲ ಬಾರಿ ಹಾರಾರ್ ಥ್ರಿಲ್ಲರ್ ಜಾನರ್ ನಲ್ಲಿ ನಟಿಸಿರುವ ಅಜಯ್ ರಾವ್, ಪತ್ರಕರ್ತನ ಪಾತ್ರದಲ್ಲಿ ಸಾಮಾನ್ಯ ಹುಡುಗನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

‘ಕೃಷ್ಣ ಟಾಕೀಸ್’ ಎಂಬ ಚಿತ್ರಮಂದಿರದ ಮೇಲೆ ಹೆಣೆಯಲಾದ ಕಥೆಯೇ ‘ಕೃಷ್ಣ ಟಾಕೀಸ್’. ಕೃಷ್ಣ ಟಾಕೀಸ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಮೇಲೆ ಒಬ್ಬರಲ್ಲ ಒಬ್ಬರು ನಾಪತ್ತೆಯಾಗುತ್ತಿರುತ್ತಾರೆ. ಒಮ್ಮೆ ನಾಯಕನ ಸ್ನೇಹಿತ ಸೂರಿ ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಲು ಹೋದ ಮೇಲೆ ಎಲ್ಲೂ ಕಾಣಸಿಗೋದಿಲ್ಲ. ತನ್ನ ಸ್ನೇಹಿತನ ಸಾವಿಗೆ ಕಾರಣ ಹುಡುಕಲು ಹೊರಟ ನಾಯಕನಿಗೆ ಹಲವು ಮಜಲುಗಳು ಸಿಗುತ್ತವೆ. ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಿದ ಮೇಲೆ ಕಾಣೆಯಾಗಲು ನಿಜವಾದ ಕಾರಣ ಏನು ಎಂಬುದನ್ನು ನಾಯಕ ಹೇಗೆ ಕಂಡು ಹಿಡಿಯುತ್ತಾನೆ ಎನ್ನುವುದರ ಸುತ್ತ ಸಿನಿಮಾ ಹೆಣೆಯಲಾಗಿದೆ. ಇದನ್ನು ರೋಚಕವಾಗಿ, ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ನೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯಾನಂದ್. ಹಾರಾರ್ ಥ್ರಿಲ್ಲರ್ ಚಿತ್ರವಾಗಿರೋದ್ರಿಂದ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಅಂಡ್ ಟರ್ನ್ ಗಳು ಸಿನಿಮಾದಲ್ಲಿದೆ. ಚಿತ್ರಕಥೆಯನ್ನು ಇಂಟ್ರಸ್ಟಿಂಗ್ ಆಗಿ ಹೆಣೆದಿರೋ ನಿರ್ದೇಶಕರು, ಪ್ರೇಕ್ಷಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲ ಕಮರ್ಶಿಯಲ್ ಸಿನಿಮಾಗಳಂತೆ ಇಲ್ಲೂ ಲವ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಬೆರೆತಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಈ ಹಿಂದಿನ ಕೃಷ್ಣ ಸೀರೀಸ್ ಸಿನಿಮಾಗಳಂತೆ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಹಾಗೂ ಅಜಯ್ ರಾವ್ ಹಿಟ್ ಕಾಂಬೋ ಈ ಸಿನಿಮಾದಲ್ಲೂ ಕಮಾಲ್ ಮಾಡಿದೆ. ಅಭೀಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಕೂಡ ಮೆಚ್ಚುವಂತದ್ದು. ಪತ್ರಕರ್ತನಾಗಿ ಅಜಯ್ ರಾವ್ ಅಭಿನಯ ನೈಜವಾಗಿ ಮೂಡಿ ಬಂದಿದ್ದು, ನಾಯಕಿಯ ಪಾತ್ರದಲ್ಲಿ ಅಪೂರ್ವ ನಟನೆ ಗಮನ ಸೆಳೆಯುತ್ತದೆ. ವಿಶೇಷ ಪಾತ್ರದಲ್ಲಿ ಸಿಂಧು ಲೋಕನಾಥ್ ಅಭಿನಯ ಚಿತ್ರಕ್ಕೆ ತಿರುವು ನೀಡುವುದರ ಜೊತೆ ಥ್ರಿಲ್ ನೀಡುತ್ತದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *