– ಹೊಲಕ್ಕೆ ಹೋಗುತ್ತಿದ್ದ ಮಹಿಳೆಯ ಕೊಲೆ
ಬಳ್ಳಾರಿ: ಹೊಲಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಧಾರುಣವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಳಗಟ್ಟ ಗುಡ್ಡದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ನಾಗಮ್ಮ (45) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ನಾಗೇನಹಳ್ಳಿ ಗ್ರಾಮದವಳು ಎಂದು ಪತ್ತೆ ಹಚ್ಚಲಾಗಿದೆ. ಹೊಲಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹೊಲಕ್ಕೆ ಕೆಲಸಕ್ಕೆ ಎಂದು ಹೋಗುತ್ತಿದ್ದ ನಾಗಮ್ಮಳನ್ನು ನಡು ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ ಆಕೆಗೆ ಕುಡುಗೋಲಿನಿಂದ ಕುತ್ತಿಗೆಯನ್ನು ಕಡಿದು, ಕಲ್ಲಿನಿಂದ ತಲೆಯನ್ನು ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ನಿನ್ನೆ ತಡರಾತ್ರಿ ದಾರಿಹೋಕರರೊಬ್ಬರು ನಾಗಮ್ಮನ ಶವ ಇರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವ ಪತ್ತೆಯಾದ ಸ್ಥಳಕ್ಕೆ ಇಂದು ಡಿವೈಎಸ್ಪಿ ರಘುಕುಮಾರ ಹಾಗೂ ಗ್ರಾಮೀಣಪೊಲೀಸ್ ಠಾಣೆ ಪಿಐ ಶ್ರೀನಿವಾಸ ಮೇಟಿ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಕೊಲೆಗೆ ಯಾವುದೇ ಸರಿಯಾದ ಕಾರಣ ದೊರೆತಿಲ್ಲ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತಿದ್ದಾರೆ.