ಕುಟುಂಬಕ್ಕೆ ಮುಜುಗರ ತಂದ ಗರ್ಭಿಣಿ ಅಪ್ರಾಪ್ತೆಯನ್ನು ಕೊಂದ ತಂದೆ!

Public TV
2 Min Read

– ಹಿಗ್ಗಾಮುಗ್ಗ ಥಳಿಸಿ ಕತ್ತು ಹಿಸುಕಿ ಕೊಲೆ
– ಸಾರ್ವಜನಿಕರು ಅವಮಾನ ಮಾಡಿದ್ದರೆಂದು ಕೃತ್ಯ

ಲಕ್ನೋ: ಯುವತಿಯನ್ನು ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಕುಟುಂಬದ ಮೇಲೆ ಅವಮಾನ ಉಂಟು ಮಾಡುವ ಕೆಲಸ ಮಾಡಿದ್ದಿ ಎಂದು ತಂದೆಯೇ ತನ್ನ 16 ವರ್ಷದ ಗರ್ಭಿಣಿ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಶಹಜಹಾನಪುರದಲ್ಲಿ ನಡೆದಿದೆ.

16 ವರ್ಷದ ಅಪ್ರಾಪ್ತೆ ಗರ್ಭಿಣಿಯಾಗಿರುವ ವಿಚಾರ ಇಡೀ ಗ್ರಾಮದಲ್ಲಿ ಹಬ್ಬಿತ್ತು. ಇದು ಆಕೆಯ ಕುಟುಂಬಕ್ಕೆ ತೀವ್ರ ಅವಮಾನ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಮೊದಲು ಆಕೆಗೆ ಚೆನ್ನಾಗಿ ಥಳಿಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ನಂತರ ಶವವನ್ನು ನದಿ ಪಾತ್ರದಲ್ಲಿ ಸಮಾಧಿ ಮಾಡಲಾಗಿದೆ.

ಇತ್ತ ಮಗಳನ್ನು ಕೊಂದಿದ್ದು ನಾನೇ ಎಂದು ತಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಆಕೆ ಗರ್ಭಿಣಿಯಾಗಿದ್ದರಿಂದ ಸಾರ್ವಜನಿಕರು ನನ್ನನ್ನು ಅವಮಾನಿಸಲು ಆರಂಭಿಸಿದರು. ಇದರಿಂದ ಮನನೊಂದು ಆಕೆಯನ್ನು ಕೊಲೆ ಮಾಡಿದ್ದೇನೆ ಎಂದಿದ್ದಾನೆ. ಕೊಲೆಯಲ್ಲಿ ಮೃತಳ ಸಹೋದರನದ್ದೂ ಪಾತ್ರವಿದೆ. ಹೀಗಾಗಿ ಪೊಲೀಸರು ಅಪ್ಪ- ಮಗನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣವನ್ನು ದಾಖಲಿಸಿದ್ದಾರೆ.

ಘಟನೆ ಸಂಬಂಧ ನಾವು ಬಾಲಕಿಯ ತಾಯಿ ಹಾಗೂ ಇತರ ಸಂಬಂಧಿಕರನ್ನು ಕೂಡ ವಿಚಾರಿಸಿದ್ದೇವೆ. ಆದರೆ ಅವರು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಶಹಜಹಾನಪುರದ ಎಸ್‍ಎಸ್‍ಪಿ ತಿಳಿಸಿದ್ದಾರೆ.

ಎಂದಿಗೂ ಶಾಲೆಗೆ ಹೋಗದ ಸಂತ್ರಸ್ತೆ ಅತ್ಯಾಚಾರದ ಬಳಿಕ ಸುಮ್ಮನಿದ್ದಳು. ಅತ್ಯಾಚಾರ ಮಾಡಿದ ವ್ಯಕ್ತಿಯ ಹೆಸರನ್ನು ಸಂತ್ರಸ್ತೆ ತನ್ನ ಕುಟುಂಬಸ್ಥರಿಗೆ ಕೂಡ ಬಹಿರಂಗಪಡಿಸಿಲ್ಲ. ಆದರೆ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇತ್ತ ಬಾಲಕಿಯ ಶವವನ್ನು ಮಂಗಳವಾರ ಹೊರತೆಗೆಯಲಾಗಿದೆ. ಸೆಪ್ಟೆಂಬರ್ 23 ರಿಂದ ಬಾಲಕಿ ಕಾಣೆಯಾಗಿದ್ದಾಳೆ. ಆದರೆ ಕುಟುಂಬ ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಕುಟುಂಬವನ್ನು ಪ್ರಶ್ನಿಸಿದಾಗ, ಬಾಲಕಿ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾಳೆ ಎಂದು ಮೊದಲು ಪೊಲೀಸರಿಗೆ ತಿಳಿಸಿದರು. ನಂತರ ಸಂತ್ರಸ್ತೆಯ ತಂದೆ ಹದಿಹರೆಯದ ಮಗಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಹುಡುಗಿಯ ಸಹೋದರ ಇನ್ನೂ ಪರಾರಿಯಾಗಿದ್ದಾನೆ. ಅಪ್ರಾಪ್ತ ಬಾಲಕಿಯೊಂದಿಗಿನ ಲೈಂಗಿಕ ಸಂಬಂಧ ಅಪರಾಧವಾದ್ದರಿಂದ ಹುಡುಗಿಯ ಗರ್ಭಧಾರಣೆಗೆ ಕಾರಣವಾದ ವ್ಯಕ್ತಿಯನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಎಸ್‍ಎಸ್‍ಪಿ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *