ಕುಕ್ಕೆ, ಧರ್ಮಸ್ಥಳ, ಕಟೀಲ್‍ನಲ್ಲಿ ದರ್ಶನಕ್ಕೆ ಮಾತ್ರ ಅವಕಾಶ

Public TV
1 Min Read

– ವೀಕೆಂಡ್‍ನಲ್ಲಿ ಸಂಪೂರ್ಣ ಬಂದ್

ಮಂಗಳೂರು: ಕೇರಳ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಾಗಾಗಿ ಕರಾವಳಿ ಪ್ರಸಿದ್ದ ಪುಣ್ಯಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ದ.ಕ ಜಿಲ್ಲೆಯಲ್ಲಿ ಅನೇಕ ಹೆಸರಾಂತ ದೇವಾಲಯಗಳಿದ್ದು ದೇವಸ್ಥಾನಕ್ಕೆ ಬರುವ ಭಕ್ತರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣು ಇಟ್ಟಿದೆ. ಆಗಸ್ಟ್ 15 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ಯಾವುದೇ ಸೇವೆಗಳು ಇರೋದಿಲ್ಲ. ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಈ ಮೂರು ದೇವಸ್ಥಾನದಲ್ಲಿ ದರ್ಶನಕ್ಕೂ ಅವಕಾಶವಿಲ್ಲ. ಇದನ್ನೂ ಓದಿ: ವೀಕೆಂಡ್‍ನಲ್ಲಿ ಪ್ರಸಿದ್ಧ ಸಿಗಂದೂರು ದೇವಾಲಯ ಬಂದ್ 

ದೇವಸ್ಥಾನದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ದೇವಸ್ಥಾನದಲ್ಲಿ ತೀರ್ಥಪ್ರಸಾದ, ಸೇವೆ ಸೇರಿದಂತೆ ಅನ್ನಸಂತರ್ಪಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವಿಕೇಂಡ್‍ನಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ದೇವಸ್ಥಾನದ ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು 72 ಗಂಟೆಗಳ ಒಳಗಿನ ನೆಗಟಿವ್ ವರದಿ ಕಡ್ಡಾಯಗೊಳಿಸಿದ್ದು. ಉಳಿದ ದಿನಗಳಲ್ಲಿ ಭಕ್ತರು ಕ್ಷೇತ್ರದಲ್ಲಿ ತಂಗುವುದಕ್ಕೂ ಜಿಲ್ಲಾಡಳಿತ ನಿಷೇಧ ಹೇರಿದೆ. ಒಟ್ಟಿನಲ್ಲಿ ಕೊರೊನಾ 3ನೇ ಅಲೆಯನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಈಗಲೇ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲಾಡಳಿತ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *