ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ 10 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ: ಸಿಎಂ

Public TV
1 Min Read

ಬೆಂಗಳೂರು: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ 10 ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆಗೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕಿತ್ತೂರು ಐತಿಹಾಸಿಕ ತಾಣಗಳ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ 50 ಕೋಟಿ ಒದಗಿಸುವುದಾಗಿ ಘೋಷಿಸಲಾಗಿತ್ತು. ಇದಕ್ಕೆ 2021-22ರಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಕ್ರಿಯಾ ಯೋಜನೆಯಡಿ ರಾಣಿ ಚೆನ್ನಮ್ಮನವರ ಸ್ಮಾರಕ ಭವನ ನಿರ್ಮಾಣ, ಚೌಕಿಮಠ ಗದ್ದುಗೆ ಅಭಿವೃದ್ಧಿ ಹಾಗೂ ಕಿತ್ತೂರು ಸಂಸ್ಥಾನದ ಅರಮನೆಯ ಪ್ರತಿರೂಪ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ಇದರೊಂದಿಗೆ ಚೆನ್ನಮ್ಮನ ಸಮಾಧಿಯ ಸ್ಥಳದ ಅಭಿವೃದ್ಧಿ, ಬೆಳವಡಿಯಲ್ಲಿ ಬೆಳವಡಿ ಮಲ್ಲಮ್ಮನ ಪ್ರತಿಮೆ ಹಾಗೂ ಇತಿಹಾಸ ಸಾರುವ ಫಲಕ ನಿರ್ಮಾಣ, ಕಿತ್ತೂರು ಸಂಸ್ಥಾನದ ಕಾಗದಪತ್ರಗಳ ಸಂರಕ್ಷಣೆ ಮೊದಲಾದವುಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ತೀರ್ಮಾನಿಸಲಾಯಿತು.

ಈವರೆಗೆ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 106 ಕಾಮಗಾರಿಗಳಲ್ಲಿ 104 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಇದೇ ವೇಳೆ ಸಿಎಂಗೆ ಮಾಹಿತಿ ನೀಡಿದರು. ಚೆನ್ನಮ್ಮನ ಅರಮನೆಯ ಪುನರ್ ನಿರ್ಮಾಣವನ್ನು ರಾಜ್ಯ ಪುರಾತತ್ವ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಕೈಗೊಳ್ಳಲು ಸಿಎಂ ಸೂಚಿಸಿದರು. ಪ್ರಾಧಿಕಾರವು ಸ್ಮಾರಕಗಳ ನಿರ್ವಹಣೆಗೆ ಸಂಪನ್ಮೂಲ ಸೃಜಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರವಾಸೋದ್ಯಮ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ತಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳು ಸೂಚನೆ ನೀಡಿದರು. ಡಿಸಿಎಂಗಳಾದ ಗೋವಿಂದ ಎಂ. ಕಾರಜೋಳ, ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಳಗಾವಿ ಜಿಲ್ಲೆಯ ಶಾಸಕರು, ಮಡಿವಾಳೇಶ್ವರ ಸ್ಮಾಮೀಜಿ ಹಾಗೂ ಪ್ರಾಧಿಕಾರದ ಮತ್ತಿತರ ಸದಸ್ಯರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *