ಬಾಗಲಕೋಟೆ: ಬೈಕ್‍ಗೆ ಡಿಕ್ಕಿ ಹೊಡೆದ ಕಾರ್ ನಂಬರ್ ಪ್ಲೇಟ್ ಅವರೇ ಜಜ್ಜಿದ್ರು. ಅಲ್ಲಿಯ ಒಬ್ಬ ಫೋಟೋ ತೆಗೆದಿದ್ದಕ್ಕೆ ನಿಂದಿಸಿ ಅವಾಜ್ ಹಾಕಿದರು. ಕೊನೆಗೆ ಬಲವಂತವಾಗಿ ಮೊಬೈಲ್ ನಲ್ಲಿಯ ಫೋಟೋ ಡಿಲೀಟ್ ಮಾಡಿದರು ಎಂದು ಅಪಘಾತದಲ್ಲಿ ಮೃತ ಕೂಡ್ಲೆಪ್ಪ ಅವರ ಸಂಬಂಧಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೃತ ಕೂಡ್ಲೆಪ್ಪ ಅಳಿಯ ಎಂ.ಎಸ್.ಬಳಬಟ್ಟಿ, ಪ್ರತಿದಿನದಂತೆ ಹೊಲಕ್ಕೆ ಹೋಗಿ, ಸಂಜೆ ಸುಮಾರು ಐದರಿಂದ ಆರು ಗಂಟೆಗೆ ಮನೆಗೆ ವಾಪಸ್ ಬರುತ್ತಿರುವಾಗ ಅಪಘಾತ ಆಗಿದೆ. ತಲೆ ಮತ್ತು ಸೊಂಟಕ್ಕೆ ಬಲವಾದ ಏಟು ಬಿದ್ದಿತ್ತು. ಕೂಡಲೇ ಅಂಬುಲೆನ್ಸ್ ಮೂಲಕ ಬಾಗಲಕೋಟೆಗೆ ಕರೆ ತಂದು ಆಸ್ಪತ್ರೆಗೆ ದಾಖಲಿಸಲಾಯ್ತು. ತದನಂತರ ಸ್ಕ್ಯಾನ್‍ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸಾವನ್ನಪ್ಪಿದ್ರು.
ಅಪಘಾತ ಆಗುತ್ತಲೇ ಇಬ್ಬರು ಎಸ್ಕೇಪ್ ಆದ್ರು. ಚಿದಾನಂದ್ ಸೇರಿದಂತೆ ಮೂವರು ಸ್ಥಳದಲ್ಲಿದ್ರು. ಅಲ್ಲಿಯ ಒಬ್ಬ ಹುಡುಗ ಫೋಟೋ ಕ್ಲಿಕ್ ಮಾಡಿದ್ದಕ್ಕೆ ಕೋಪಗೊಂಡ ಚಿದಾನಂದ್ ಸವದಿ, ನಾನು ಡಿಸಿಎಂ ಮಗ ಅಂತ ಅವಾಜ್ ಹಾಕಿದರು. ಬಲವಂತವಾಗಿ ಮೊಬೈಲ್ ಕಿತ್ಕೊಂಡು ಫೋಟೋ ಡಿಲೀಟ್ ಮಾಡಿದರು. ಸ್ಥಳದಲ್ಲಿ ಹೆಚ್ಚು ಜನ ಸೇರುತ್ತಿದ್ದಂತೆ ಪೊಲೀಸರು ಬಂದರು. ಪೊಲೀಸರು ಬರುತ್ತಿದ್ದಂತೆ ಚಿದಾನಂದ್ ಸವದಿ ಮತ್ತು ಗೆಳೆಯರು ಎಸ್ಕೇಪ್ ಆದ್ರು.
ಪೊಲೀಸರ ಮುಂದೆ ಕಾರ್ ನಲ್ಲಿ ಚಿದಾನಂದ್ ಇದ್ರು ಹೇಳಿದ್ದೀವಿ. ಆದ್ರೆ ಈಗ ಅವರು ಕಾರ್ ನಲ್ಲಿ ನಾನಿರಲ್ಲ ಅಂತ ಹೇಳ್ತಿದ್ದಾರೆ. ಮೌಖಿಕವಾಗಿ ದೂರು ಸಲ್ಲಿಸುವಾಗಲೇ ನಮ್ಮ ಕುಟುಂಬ ಚಿದಾನಂದ್ ಹೆಸರನ್ನೇ ಹೇಳಿದ್ದೀವಿ. ಇಷ್ಟೆಲ್ಲ ಘಟನೆ ನಡೆದ್ರೂ ಸವದಿ ಅವರ ಪುತ್ರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳುವ ಸೌಜನ್ಯ ಸಹ ತೋರಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದಕ್ಕೆ ಕಾರ್ ಡಿಕ್ಕಿ ಆಯ್ತು: ಚಿದಾನಂದ್ ಸವದಿ