ಕಾರ್ಮಿಕರಿಗಾಗಿ 68 ಸಾವಿರ ರೂ. ವ್ಯಯಿಸಿ 10 ವಿಮಾನ ಟಿಕೆಟ್ ಖರೀದಿಸಿದ ರೈತ

Public TV
2 Min Read

– ಕಾಲ್ನಡಿಗೆಯಲ್ಲಿ ಹೊರಟವರಿಗೆ ವಿಮಾನಯಾನ
– ರೈತನ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು

ನವದೆಹಲಿ: ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ 10 ಕಾರ್ಮಿಕರು ತಮ್ಮ ತವರಿಗೆ ತೆರಳುವ ಕನಸು ಕಾಣುತ್ತಿದ್ದರು. ರೈತ ಅವರ ಕನಸನ್ನು ಈಡೇರಿಸಿದ್ದು, 68 ಸಾವಿರ ರೂ.ಗಳ ವಿಮಾನ ಟಿಕೆಟ್ ಖರೀದಿಸಿ, ತಮ್ಮ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡಲು ಸಿದ್ಧತೆ ನಡೆಸಿದ್ದಾರೆ.

ದೆಹಲಿಯ ರೈತರೊಬ್ಬರು ಈ ಮಹತ್ಕಾರ್ಯ ಮಾಡಿದ್ದು, ಬಿಹಾರ ಮೂಲದ ಕಾರ್ಮಿಕರನ್ನು ವಿಮಾನದ ಮೂಲಕ ಕಳುಹಿಸಿಕೊಡಲು ಈಗಾಗಲೇ ಟಿಕೆಟ್ ಖರೀದಿಸಿದ್ದು, ಗುರುವಾರ ಬೆಳಗ್ಗೆ 6ಕ್ಕೆ ವಿಮಾನ ಪಾಟ್ನಾಗೆ ಹೊರಡಲಿದೆ. ಕಾರ್ಮಿಕರು ಲಾಕ್‍ಡೌನ್ ಆದಾಗಿನಿಂದ ಅಂದರೆ ಏಪ್ರಿಲ್‍ನಿಂದಲೂ ತಮ್ಮ ಊರಿಗೆ ತೆರಳುವ ಕುರಿತು ಪ್ಲ್ಯಾನ್ ಮಾಡುತ್ತಿದ್ದರು. ಸಮಸ್ತಿಪುರದ ತಮ್ಮ ಹಳ್ಳಿಗೆ ಹೋಗಲು ಸೈಕಲ್, ನಡೆದು ಅಥವಾ ಬಸ್‍ಗಳಲ್ಲಿ ಕಷ್ಟಪಟ್ಟು ಸೀಟ್ ಹಿಡಿದಾದರೂ ಊರಿಗೆ ತೆರಳಲು ನಿರ್ಧರಿಸಿದ್ದರು. ಆದರೆ ಅವರಿಗೆ ವಿಮಾನದಲ್ಲಿ ಹೋಗುವ ಅದೃಷ್ಟ ಲಭಿಸಿದೆ.

ನನ್ನ ಜೀವಿತಾವಧಿಯಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುತ್ತೇನೆಂದು ಯಾವತ್ತೂ ಊಹಿಸಿರಲಿಲ್ಲ. ನನ್ನ ಸಂತಸವನ್ನು ವ್ಯಕ್ತಪಡಿಸಲು ಪದಗಳೇ ಸಾಲುತ್ತಿಲ್ಲ. ಆದರೆ ನಾಳೆ ವಿಮಾನ ನಿಲ್ದಾಣ ತಲುಪಿದ ಬಳಿಕ ನಾನು ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ದೆಹಲಿಯ ಟಿಗಿಪುರ ಗ್ರಾಮದ ಮಶ್ರೂಮ್ ಕೃಷಿಕ ಪಪ್ಪನ್ ಸಿಂಗ್ ಅವರಿಗೆ ಕೃತಜ್ಞನಾಗಿದ್ದೇವೆ ಎಂದು ಗುರುವಾರ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧವಾಗಿರುವ ಕಾರ್ಮಿಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಲಖಿಂದರ್ ಕಳೆದ 27 ವರ್ಷಗಳಿಂದ ಪಪ್ಪನ್ ಸಿಂಗ್ ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 25ರಂದು ಲಾಕ್‍ಡೌನ್ ಘೋಷಣೆಯಾದಾಗಿನಿಂದ ನಮ್ಮ ಯಜಮಾನ ರೈತ ನಮಗೆ ಊಟ, ಉಳಿದುಕೊಳ್ಳಲು ಸ್ಥಳ ನೀಡಿ ಸಹಾಯ ಮಾಡಿದ್ದಾರೆ ಎಂದು ಲಖಿಂದರ್ ಹೇಳಿದ್ದಾರೆ.

ಈ ಕುರಿತು ರೈತ ಪಪ್ಪನ್ ಅವರು ಮಾಹಿತಿ ನೀಡಿ, 68 ಸಾವಿರ ರೂ. ಟಿಕೆಟ್ ಬುಕ್ ಮಾಡಿದ್ದೇನೆ. ಪ್ರತಿಯೊಬ್ಬರಿಗೂ 3 ಸಾವಿರ ರೂ.ಹಣ ನೀಡಿದ್ದೇನೆ. ಅವರು ಮನೆಗೆ ತೆರಳಲು ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ ತಮ್ಮದೇ ವಾಹನದಲ್ಲಿ ಅವರನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಏ.1ರಂದು ಅವರು ಬಿಹಾರದಲ್ಲಿನ ತಮ್ಮ ಮನೆಗಳಿಗೆ ತರಳಲು ಪ್ರಯತ್ನಿಸಿದರು, ಆದರೆ ಲಾಕ್‍ಡೌನ್ ನಿಂದಾಗಿ ಸಾಧ್ಯವಾಗಲಿಲ್ಲ. ಶ್ರಮಿಕ್ ರೈಲುಗಳು ಪ್ರಾರಂಭವಾದ ನಂತರ ನಾನೂ ಸಹ ಅವರನ್ನು ಮನೆಗೆ ಕಳುಹಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ, ಹೀಗಾಗಿ ವಿಮಾನದಲ್ಲಿ ಕಳುಹಿಸುತ್ತಿದ್ದೇನೆ ಎಂದು ವಿವರಿಸಿದರು.

ನಡೆದುಕೊಂಡು ಹಾಗೂ ಕಷ್ಟದಿಂದ ಅವರ ಪ್ರಾಣವನ್ನೇ ಪಣಕ್ಕಿಟ್ಟು ಸಾವಿರಾರು ಕಿ.ಮೀ. ದೂರದ ಊರು ತಲುಪಿಸಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಈ ನಿರ್ಧಾರ ಮಾಡಿದೆ. ಈಗಾಗಲೇ ಅವರ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದೇನೆ. ಈ ಕುರಿತು ವರದಿ ಪಡೆದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ಬಂದಿದೆ. ನಾನು 1993ರಿಂದಲೂ ಮಶ್ರೂಮ್ ಬೆಳೆಯುತ್ತಿದ್ದೇನೆ ಎಂದು ರೈತ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *