ಕಾರು ಅಪಘಾತ ಕೇಸ್, ಚಾರ್ಜ್‍ಶೀಟ್ ಸಲ್ಲಿಕೆ – ಶರ್ಮಿಳಾ ಮಾಂಡ್ರೆ ಆರೋಪಿಯಲ್ಲ

Public TV
3 Min Read

– ಹೈ ಗ್ರೌಂಡ್ಸ್ ಟ್ರಾಫಿಕ್ ಪೊಲೀಸರಿಂದ ಚಾರ್ಜ್‍ಶೀಟ್ ಸಲ್ಲಿಕೆ
– ಎರಡು ದಿನ ಮೂರು ಆಸ್ಪತ್ರೆಗೆ ಜಿಗಿದಿದ್ದು ಯಾಕೆ?

ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅವರಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಆದರೆ ಈ ಪ್ರಕರಣದಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿಯಲ್ಲ ಎಂದು ಉಲ್ಲೇಖವಾಗಿದೆ.

ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಏಪ್ರಿಲ್ 4ರಂದು ಬೆಳಗಿನ ಜಾವ ನಟಿ ಶರ್ಮಿಳಾ ಮಾಂಡ್ರೆ ಇದ್ದ ಕಾರು ವಸಂತನಗರ ಫ್ಲೈ ಓವರ್‌ನ ಕಂಬಕ್ಕೆ ಗುದ್ದಿತ್ತು. ಅಪಘಾತವಾದ ಬಳಿಕ ಜಾಗ್ವಾರ್ ಕಾರ್ ಅಲ್ಲೇ ಬಿಟ್ಟು ಶರ್ಮಿಳಾ ಮತ್ತು ಅವರ ಸ್ನೇಹಿತರು ಆಸ್ಪತ್ರೆಗೆ ತೆರಳಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸರು 4ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

32 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಆದರಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿ ಅಲ್ಲ ಎಂದು ಉಲ್ಲೇಖಿಸಲಾಗಿದೆ. ಡ್ರೈವಿಂಗ್ ಸರಿಯಾಗಿ ಬರದಿದ್ರೂ ಓವರ್ ಸ್ಪೀಡ್‍ನಲ್ಲಿ ಕಾರು ಓಡಿಸಿದ್ದೆ ಅಪಘಾತಕ್ಕೆ ಮುಖ್ಯ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.

ಪ್ರಕರಣದಲ್ಲಿ ಕಾರು ಚಾಲಾಯಿಸುತ್ತಿದ್ದ ಡಾನ್ ಥಾಮಸ್ ಆರೋಪಿ ಎಂದು ಗುರುತಿಸಿ, ಕಾರಿನಲ್ಲಿದ್ದ ಶಿಫಾ ಜೋಹರ್, ಲೋಕೇಶ್ ಕುಮಾರ್, ನಿಕಿಲ್ ಮತ್ತು ಶರ್ಮಿಳಾ ಮಾಂಡ್ರೆಯನ್ನು ಪ್ರಕರಣದಿಂದ ಕೈಬಿಡಲಾಗಿದೆ.

ಚಾರ್ಜ್‍ಶೀಟ್‍ನಲ್ಲಿ ಏನಿದೆ?
ಏಪ್ರಿಲ್ 4ರಂದು ನಡೆದ ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರಿಗೆ ಗಂಭೀರವಾಗಿ ಗಾಯವಾಗಿತ್ತು. ಈ ವೇಳೆ ಬೆಳಗಿನ ಜಾವ 3:45ಕ್ಕೆ ಪೋರ್ಟಿಸ್ ಆಸ್ಪತ್ರೆಗೆ ತೆರಳಿದ್ದ ಗಾಯಾಳುಗಳು ಕೇವಲ ಪ್ರಾಥಮಿಕ ಚಿಕಿತ್ಸೆ ಪಡೆದು ಎಸ್ಕೇಪ್ ಆಗಿದ್ದರು. ನಂತರ ಅದೇ ದಿನ ಮಧ್ಯಾಹ್ನ 1:30ರ ವೇಳೆಗೆ ಯಶವಂತಪುರದ ಸ್ಪರ್ಶ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು. ಈ ವೇಳೆ ಸ್ಥಳೀಯ ಪೊಲೀಸರ ಮಾಹಿತಿ ಆಧರಿಸಿ ಹೈಗ್ರೌಂಡ್ಸ್ ಟ್ರಾಫಿಕ್ ಮಾಹಿತಿ ಪಡೆಯಲು ಆಸ್ಪತ್ರೆಗೆ ಹೋಗಿದ್ದರು.

ಪೊಲೀಸರು ಬರುವಷ್ಟರಲ್ಲಿ ಅಲ್ಲಿಂದ ಶರ್ಮಿಳಾ ಮಾಂಡ್ರೆ ಪರಾರಿಯಾಗಿದ್ದರು. ವೈದ್ಯರ ಸಲಹೆ ಧಿಕ್ಕರಿಸಿ ಡಿಸ್ಚಾರ್ಜ್ ಆಗಿ ಹೋಗಿದ್ದರು. ನಂತರ ಏಪ್ರಿಲ್ 5ರಂದು ಸಂಜೆ 5:5ರಲ್ಲಿ ಹೆಬ್ಬಾಳದ ಆಸ್ಟ್ರಾ ಆಸ್ಪತ್ರೆಯಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದರು. ಈ ವೇಳೆ ಹೈ ಗ್ರೌಂಡ್ಸ್ ಟ್ರಾಫಿಕ್ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಆದರೆ ಆಗ ಹೇಳಿಕೆ ಪಡೆಯದಂತೆ ಆಸ್ಪತ್ರೆಯ ವೈದ್ಯರು ತಡೆದಿದ್ದಾರೆ. ಬಳಿಕ ಏಪ್ರಿಲ್ 6ರಂದು ಪೊಲೀಸರಿಗೆ ಸಿಕ್ಕ ಶರ್ಮಿಳಾ ಮಾಂಡ್ರೆ ಮಾಹಿತಿ ನೀಡಿದ್ದಾರೆ.

ಈ ವೇಳೆ ನಾನು ಕಾರು ಚಾಲನೆ ಮಾಡಿಲ್ಲ. ನನ್ನ ಸ್ನೇಹಿತ ಡಾನ್ ಥಾಮಸ್ ಅವರು ಕಾರು ಚಾಲನೆ ಮಾಡಿದ್ದಾರೆ ಎಂದು ಮಾಂಡ್ರೆ ಹೇಳಿದ್ದಾರೆ ಎಂಬ ಅಂಶ ಉಲ್ಲೇಖವಾಗಿದೆ.

ಪ್ರಶ್ನೆಗಳಿಗೆ ಬೇಕಿದೆ ಉತ್ತರ?
ಕೋವಿಡ್ ಪಾಸ್ ತೆಗೆದು ಶರ್ಮಿಳಾ ಜಾಲಿ ರೈಡ್ ಮಾಡಿದ್ರಾ? ಈ ನಡುವೆ ಘಟನೆ ನಡೆದು ಎರಡು ದಿನಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಶರ್ಮಿಳಾ ಮಾಂಡ್ರೆ ಹೋಗಿದ್ದು ಯಾಕೆ? ಫೋರ್ಟಿಸ್ ಆಸ್ಪತ್ರೆಯಲ್ಲಿ ರಕ್ತದ ಮಾದರಿ ತೆಗೆದುಕೊಳ್ಳಲು ಮುಂದಾಗಿದ್ದಕ್ಕೆ ಆಸ್ಪತ್ರೆ ಬದಲಾಯಿಸಿದ್ರಾ? ರಕ್ತದ ಮಾದರಿ ತೆಗೆದುಕೊಂಡರೆ ಸತ್ಯ ಹೊರಬುರುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಬದಲಾಯಿಸಿದ್ರಾ? ಅಂದು ಮಾಡಿದ ಪಾರ್ಟಿಯ ಕುರುಹುಗಳು ಸಿಗಬಾರದೆಂದು ಮೂರು ದಿನ ಕಣ್ಣ ಮುಚ್ಚಾಲೆ ಆಡಿದ್ರಾ? ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಗಬೇಕಿದೆ.

ಶರ್ಮಿಳಾ ಹೇಳಿದ್ದು ಏನು?
ಸ್ನೇಹಿತರೊಂದಿಗೆ ಶರ್ಮಿಳಾ ಪಾರ್ಟಿ ಮಾಡಲು ತೆರಳಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅವರು, ನಾನು ಔಷಧಿ ತರುವ ಸಲುವಾಗಿ ಹೊರಗೆ ಬಂದಿದ್ದೆ ಎಂದು ಹೇಳಿದ್ದರು. ಅಪಘಾತಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಿದ್ದ ಶರ್ಮಿಳಾ ನಂತರ ಮೌನಕ್ಕೆ ಜಾರಿದ್ದರು. ಮೌನಕ್ಕೆ ಜಾರಿದ್ದು ಯಾಕೆ? ಔಷಧಿ ತರಲು ಅಷ್ಟು ಸಂಖ್ಯೆಯ ಸ್ನೇಹಿತರ ಜೊತೆ ತೆರಳಿದ್ದು ಯಾಕೆ ಎಂಬ ಪ್ರಶ್ನೆ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ತನಿಖೆಯ ಬಗ್ಗೆ ಅನುಮಾನ:
ಅಪಘಾತ ನಡೆದ ಬಳಿಕ ಪೊಲೀಸರ ತನಿಖೆಯ ಬಗ್ಗೆ  ಸಾಕಷ್ಟು ಅನುಮಾನ ಎದ್ದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಜನ ಪ್ರಶ್ನಿಸಿ ಬೆಂಗಳೂರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ಲಾಕ್‍ಡೌನ್ ನಿಯಮಗಳು ತುಂಬ ಬಿಗಿಯಾಗಿತ್ತು. ಪಾಸ್ ಇಲ್ಲದೆ ಯಾವುದೇ ವಾಹನ ರಸ್ತೆಗೆ ಇಳಿಯುವಂತೆ ಇರಲಿಲ್ಲ. ಸೂಕ್ತ ಕಾರಣ ಇಲ್ಲದೆ ರಸ್ತೆಯಲ್ಲಿ ಕಾಣಿಸಿಕೊಂಡವರ ಮೇಲೆ ಪೊಲೀಸರು ಕ್ರಮ ಕೈಗೊಂಡು ವಾಹನಗಳನ್ನು ಜಪ್ತಿ ಮಾಡಿ ದಂಡ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಶರ್ಮಿಳಾ ಐಷಾರಾಮಿ ಕಾರಿನಲ್ಲಿ ಯಾಕೆ ಮತ್ತು ಎಲ್ಲಿಗೆ ಪ್ರಯಾಣ ಮಾಡುತ್ತಿದ್ದರು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಜನ ಖಾರವಾಗಿ ಪ್ರಶ್ನೆ ಮಾಡುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *