ಕಾರವಾರದಲ್ಲಿ ಶೂನ್ಯ ನೆರಳಿನ ಕೌತುಕ- ಬಿಸಿಲಿನಲ್ಲಿ ನಿಂತರೂ ನೆರಳು ಮಾಯ

Public TV
1 Min Read

ಕಾರವಾರ: ಯಾರು ನಮ್ಮನ್ನು ಹಿಂಬಾಲಿಸುತ್ತಾರೋ ಇಲ್ಲವೊ, ಆದರೆ ನೆರಳು ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುತ್ತೇವೆ. ಹೀಗಿರುವಾಗ ಆ ನೆರಳೇ ಮಾಯವಾದರೆ ಹೇಗೆ ಎಂಬ ಪ್ರಶ್ನೆ ಹಲವು ಬಾರಿ ಕಾಡುತ್ತದೆ. ನಗರದಲ್ಲಿ ಅಂತಹ ಅದ್ಭುತವೊಂದು ನಡೆದಿದ್ದು, ಶೂನ್ಯ ನೆರಳಿನ ವಿಜ್ಞಾನದ ಕೌತುಕ ಕಂಡುಬಂತು.

ನಗರದ ಕೋಡಿಬಾಗದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕಂಬವೊಂದನ್ನು ಬಿಸಿಲಿನಲ್ಲಿ ಇಟ್ಟು ಇದನ್ನು ಪತ್ತೆ ಹಚ್ಚಲಾಯಿತು. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳಲಿಲ್ಲ. ಸಾಮಾನ್ಯವಾಗಿ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸದು.

ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಕಾಣಬಹುದಾಗಿದೆ. ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾಗೂ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಹಾದು ಹೋಗುವ ವೇಳೆ ಮಾತ್ರ ಈ ಅಪರೂಪದ ವಿದ್ಯಮಾನ ನಡೆಯುತ್ತದೆ. ಇಂದು ಸೂರ್ಯ ನಡು ನೆತ್ತಿಯ ಮೇಲಿದ್ದರಿಂದ (ಮಧ್ಯಾಹ್ನ 12.31ರಿಂದ 12.33ರ ನಡುವೆ) ಯಾವುದೇ ವಸ್ತುವಿನ ನೆರಳು ಅಕ್ಕ ಪಕ್ಕ ಬೀಳಲಿಲ್ಲ.

ಶೂನ್ಯ ನೆರಳಿನ ಸಮಯ ಪ್ರದೇಶದಿಂದ ಪ್ರದೇಶಕ್ಕೆ ಕೆಲ ನಿಮಿಷಗಳ ವ್ಯತ್ಯಾಸವನ್ನು ಹೊಂದಿದೆ. ಈ ಬಾರಿ ಕಾರವಾರ, ಯಲ್ಲಾಪುರ, ಹಾವೇರಿ ಹಾಗೂ ಆಂಧ್ರ ಪ್ರದೇಶದ ಕೆಲ ಭಾಗಗಳಲ್ಲಿ ಮಾತ್ರ ಈ ವಿಜ್ಞಾನದ ಕೌತುಕ ಕಂಡುಬಂದಿದೆ.

ಪ್ರತಿ ವರ್ಷ ಈ ವಿಶೇಷ ಕೌತುಕವನ್ನು ವಿದ್ಯಾರ್ಥಿಗಳು ಕೂಡ ವೀಕ್ಷಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ವೀಕ್ಷಿಸಲು ಸೂಚಿಸಲಾಗಿದೆ. ನಾವು ಇಲ್ಲಿ ಕಲೆ ಹಾಕಿದ ಮಾಹಿತಿಯನ್ನು ಬೆಂಗಳೂರಿನ ಜವಹರಲಾಲ್ ನೆಹರು ಕೇಂದ್ರಕ್ಕೆ ಕಳುಹಿಸುವುದಾಗಿ ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಸಂಜೀವ್ ದೇಶಪಾಂಡೆ ತಿಳಿಸಿದರು.

ವರ್ಷದಲ್ಲಿ ಎರಡು ಬಾರಿ ಈ ಶೂನ್ಯ ನೆರಳಿನ ದಿನ ಬರುತ್ತದೆ. ಇಂತಹ ಪ್ರಕೃತಿ ವಿಸ್ಮಯ ಎಲ್ಲ ಭಾಗದಲ್ಲೂ ಕಾಣಸಿಗುವುದಿಲ್ಲ. ಅಂತದರಲ್ಲಿ ಕಾರವಾರದಲ್ಲಿ ಇಂದು ಕಂಡಿದ್ದು ವಿಜ್ಞಾನಿಗಳಿಗೆ ಸೂರ್ಯ ಹಾಗೂ ಭೂಮಿಯ ಮತ್ತಷ್ಟು ಅಧ್ಯಯನಕ್ಕೆ ಸಹಕಾರಿಯಾಯಿತು.

Share This Article
Leave a Comment

Leave a Reply

Your email address will not be published. Required fields are marked *