– ರೈತರ ಮೊಗದಲ್ಲಿ ಮಂದಹಾಸ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುರುವಾರ ಮಳೆರಾಯನ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ. ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಧ್ಯಾಹ್ನದ ನಂತರ ಆರಂಭವಾದ ಮಳೆ ಒಂದೆರಡು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯುತ್ತಿತ್ತು.
ಬುಧವಾರ ಮಲೆನಾಡಿನ ಕೆಲ ಭಾಗಗಳಲ್ಲಿ ಮಳೆಯಾಗಿದ್ದರೆ ಜಿಲ್ಲೆಯ ಬಯಲುಸೀಮೆ ಭಾಗಗಳಾದ ಕಡೂರು, ಬೀರೂರು, ಅಜ್ಜಂಪುರ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಸಂಜೆ ಬಳಿಕ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಸುರಿದಿದೆ. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಕಳಸ, ಕೊಪ್ಪ, ಬಾಳೆಹೊನ್ನೂರು ಭಾಗದಲ್ಲಿ ಮಳೆ ಸುರಿದಿದೆ.
ಅಜ್ಜಂಪುರ ತಾಲೂಕಿನಲ್ಲಿ ಸುಮಾರು ಒಂದು ಗಂಟೆಗಳ ಮಳೆ ಸುರಿದಿದೆ. ಕಡೂರು ತಾಲೂಕಿನ ಬೀರೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೀರೂರಿನ ಬಡಾವಣೆಯಲ್ಲಿ ಮಳೆ ನೀರು ವೃದ್ಧೆಯೊಬ್ಬರ ಮನೆಗೆ ನುಗ್ಗಿತ್ತು. ಸ್ಥಳೀಯ ಯುವಕರು ವೃದ್ಧೆ ಮನೆಯಿಂದ ಮಳೆ ನೀರನ್ನ ಎತ್ತಿ ಹೊರ ಹಾಕಿದ್ದಾರೆ. ಕಡೂರು ಹಾಗೂ ಬೀರೂರಿನಲ್ಲಿ ಮಳೆ ನೀರು ರಸ್ತೆ ಮೇಲೆ ನದಿಯಂತೆ ಹರಿದಿದೆ.
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ ಮಧ್ಯಾಹ್ನ ಸಂಜೆಯಾಗುತ್ತಿದ್ದಂತೆ ಮಳೆ ಆರಂಭವಾಗುತ್ತಿದ್ದು ಅಗತ್ಯಕ್ಕನುಗುಣವಾಗಿ ಮಳೆ ಸುರಿಯುತ್ತಿರೋದ್ರಿಂದ ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಇನ್ನು ಮಲೆನಾಡು ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಅಲ್ಲಲ್ಲೆ ಮರಗಳು ಮುರಿದು ಬಿದ್ದಿದೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಮಲೆನಾಡಿನ ಕೆಲ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.