ಕಾಫಿನಾಡಿನ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ- ದತ್ತಾತ್ರೇಯನ ದರ್ಶನಕ್ಕೂ ಅವಕಾಶ

Public TV
1 Min Read

ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲ್ಲಿನಲ್ಲಿರೋ ದತ್ತಪೀಠದಲ್ಲೂ ಭಕ್ತರಿಗೆ ದತ್ತಾತ್ರೇಯನ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿದೆ.

ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹಾಗೂ ದೇಗುಲಗಳಿಗೆ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಅವಕಾಶ ಇರಲಿಲ್ಲ. ಮುಳ್ಳಯ್ಯನಗಿರಿಗೆ ಬರುವ ಎಲ್ಲಾ ಧರ್ಮದ ಪ್ರವಾಸಿಗರು ಕೂಡ ಗುರುದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾಕ್ಕೆ ಭೇಟಿ ನೀಡುತ್ತಿದ್ದರು. ಅಲ್ಲಿ ದತ್ತಪೀಠದ ಸೌಂದರ್ಯದ ಜೊತೆ ದತ್ತಾತ್ರೇಯನ ದರ್ಶನ ಪಡೆಯುತ್ತಿದ್ದರು. ಆದರೆ ಎರಡು ತಿಂಗಳಿಂದ ಪ್ರವಾಸಿಗರಿಗೂ ನಿಷೇಧವಿದ್ದ ಕಾರಣ ದತ್ತಪೀಠಕ್ಕೆ ಪ್ರವಾಸಿಗರು, ಭಕ್ತರು ಹೋಗಿರಲಿಲ್ಲ.

ಈಗ ಸರ್ಕಾರವೇ ದೇವಾಲಯಗಳನ್ನ ಓಪನ್ ಮಾಡಲು ಅವಕಾಶ ನೀಡಿರುವುದರಿಂದ ಜಿಲ್ಲಾಡಳಿತ ಭಕ್ತರಿಗೆ ದತ್ತಾತ್ರೇಯನ ದರ್ಶನಕ್ಕೆ ಅವಕಾಶ ಕಲ್ಪಸಿದೆ. ಆದರೆ ಕೆಲವು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಪ್ರತಿಯೊಬ್ಬರಿಗೂ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಇಲ್ಲದವರಿಗೆ ಪ್ರವೇಶವಿಲ್ಲ. ಗುಹೆಯ ಒಳಗೆ ಪ್ರವೇಶ ಮಾಡಿದಾಗಿನಿಂದ ಹೊರಬರುವವರೆಗೂ ಜಿಲ್ಲಾಡಳಿತ ಮಾರ್ಕ್ ಮಾಡಿದ್ದು, ಪ್ರತಿಯೊಬ್ಬರೂ ಮಾರ್ಕ್ ಒಳಗೆ ಸಂಚರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ.

ಪ್ರತಿಯೊಬ್ಬರಿಗೆ ಗುಹೆಯ ಹೊರಭಾಗ ಹಾಗೂ ಒಳಭಾಗದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ಕೂಡ ಕಡ್ಡಾಯವಾಗಿದೆ. ಪ್ರತಿಯೊಬ್ಬರು ಕೂಡ ಸ್ವಯಂ ಪ್ರೇರಿತವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಕೂಡ ಮಾಡಲಾಗಿದೆ. ಜೊತೆಗೆ ಪೊಲೀಸರು ಹಾಗೂ ಸಿಬ್ಬಂದಿ ಭಕ್ತರಿಗೆ ಸಾಮಾಜಿಕ ಅಂತರದ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.

ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿ ಸಹಜ ಜೀವನಕ್ಕೆ ಅವಕಾಶ ನೀಡುತ್ತಿದ್ದಂತೆ ಕಾಫಿನಾಡಿಗೆ ಬರುತ್ತಿರೋ ಭಕ್ತರು ಹಾಗೂ ಪ್ರವಾಸಿಗರು ಕಾಫಿನಾಡ ಸೌಂದರ್ಯಕ್ಕೆ ಫಿದಾ ಆಗುತ್ತಿದ್ದಾರೆ. ಕಳೆದ ಎರಡ್ಮೂರು ದಶಕಗಳಲ್ಲಿ ಸ್ಥಳೀಯರೇ ಕಾಣದಂತ ಹೊಸ ಕಾಫಿನಾಡು ಉದಯವಾಗಿದೆ. ಜಿಲ್ಲೆಗೆ ಬರುತ್ತಿರುವಂತಹ ಪ್ರವಾಸಿಗರು ಮುಳ್ಳಯ್ಯನಗಿರಿಯ ಮನಮೋಹಕ ಸೊಬಗಿನ ಮಧ್ಯೆ ತಮ್ಮನ್ನ ತಾವೇ ಮರೆಯುತ್ತಾ, ದತ್ತಪೀಠಕ್ಕೆ ಬಂದು ದತ್ತಾತ್ರೇಯ ದರ್ಶನದೊಂದಿಗೆ ಸುತ್ತಮುತ್ತಲಿನ ಮುಗಿಲೆತ್ತರದ ಬೆಟ್ಟಗುಡ್ಡಗಳ ಕಂಡು ಪುಳಕಿತರಾಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *