ಕಾಫಿನಾಡಲ್ಲಿ ವ್ಯಾಕ್ಸಿನ್ ಹೆಸರಲ್ಲಿ ಭಾರೀ ಕಳ್ಳಾಟ -ಅಧಿಕಾರಿಗಳ ಮನೆಯವ್ರಿಗೆ ಸುಲಭವಾಗಿ ಸಿಗುತ್ತೆ ಲಸಿಕೆ..!

Public TV
1 Min Read

ಚಿಕ್ಕಮಗಳೂರು: ವ್ಯಾಕ್ಸಿನ್‍ಗಾಗಿ ಜನ ಮುಗಿಬೀಳೋದನ್ನು ನಾವೆಲ್ಲಾ ಕಂಡಿದ್ದೇವೆ. ಆದರೆ ಕಾಫಿನಾಡಲ್ಲಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಯಾರದ್ದೋ ಹೆಸರಿನಲ್ಲಿ ಮತ್ಯಾರೋ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ಈ ರೀತಿಯ ಅಸಲಿ-ನಕಲಿ ಆಟಕ್ಕೆ ಅಧಿಕಾರಿಗಳೇ ಬೆಂಗಾವಲಾಗಿದ್ದಾರೆ.

ಕೊರೊನಾ ವ್ಯಾಕ್ಸಿನ್ ಕೆಲ ದಿನಗಳಿಂದ ಕೆಲವರಿಗೆ ದಂಧೆಯೇ ಆಗೋಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಜೂನ್ 2 ರಂದು ಇಲ್ಲಿನ ಸಿಬ್ಬಂದಿಗೆ ಕೊರೊನಾ ವಾರಿಯರ್ ಅಂತ ವ್ಯಾಕ್ಸಿನ್ ಹಾಕಲು ಮುಂದಾಗಿದ್ದರು. ಅಂದು ಕೆ.ಎನ್.ಸೋಮಶೇಖರ್ ಎಂಬ ವ್ಯಕ್ತಿ ಡಿದರ್ಜೆ ನೌಕರನೆಂದು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಆತನಿಗೂ ಇಲಾಖೆಗೂ ಯಾವುದೇ ಸಂಬಂಧ ಇಲ್ಲದಿದ್ರೂ ಮೂಡಿಗೆರೆ ಆರ್.ಎಫ್.ಓ. ಅವರು ನಮ್ಮ ಸಿಬ್ಬಂದಿ ಎಂದು ಇಲಾಖೆಯಿಂದ ಅಧಿಕೃತ ಲೆಟರ್ ಕಳಿಸಿರೋದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಆಕ್ರೋಶ ಹೊರಹಾಕಿರೋ ಸ್ಥಳೀಯರು, ನಾವು ದಿನಗಟ್ಟಲೇ ಕಾಯ್ತೀವಿ. ಅಧಿಕಾರಿಗಳಿಗೆ ಬೇಕಾದವರಿಗೆ, ಮನೆಯವರಿಗೆ ನಕಲಿ ದಾಖಲೆ ಕೊಟ್ಟು ವ್ಯಾಕ್ಸಿನ್ ಹಾಕಿಸೋದು ಎಷ್ಟು ಸರಿ ಎಂದು ಸ್ಥಳಿಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಸಿಬ್ಬಂದಿ ವ್ಯಾಕ್ಸಿನ್‍ಗೆ ಹೋದ ಪಟ್ಟಿಯಲ್ಲಿ ಸೋಮಶೇಖರ್ ಹೆಸರಿದೆ. ಈ ವಿಷಯ ಈಗ ತಹಶೀಲ್ದಾರ್ ಕಚೇರಿ ತಲುಪಿದೆ. ಸ್ಥಳಿಯರ ದೂರಿನ ಅನ್ವಯ ತಹಶೀಲ್ದಾರ್ ಕೂಡ ಕಾರಣ ಕೇಳಿ ಆರ್.ಎಫ್.ಓಗೆ ನೋಟಿಸ್ ನೀಡಿದ್ದು, ಆರ್.ಎಫ್.ಓ. ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ರೂಲ್ಸ್ ಬ್ರೇಕ್ – ಕೋವಿಡ್‍ನಿಂದ ಸತ್ತ ವ್ಯಕ್ತಿಯ ಮೃತದೇಹ ಮೆರವಣಿಗೆ

ಒಟ್ಟಾರೆ ಸೋಮಶೇಖರ್ ಎಂಬ ವ್ಯಕ್ತಿ ಅರಣ್ಯ ಇಲಾಖೆ ಅಧಿಕಾರಿಯ ಪತಿ ಎಂದು ಹೇಳಲಾಗ್ತಿದೆ. ಅಧಿಕಾರಿಯ ಕುಟುಂಬಸ್ಥರಿಗೆ ವ್ಯಾಕ್ಸಿನ್ ಹಾಕಿಸಲು ಇಲಾಖೆಯ ಸಿಬ್ಬಂದಿಯೇ ಮಾಡಿದ ಡ್ರಾಮಾ ವಿರುದ್ಧ ಮೂಡಿಗೆರೆ ಜನ ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ಎಸ್ಪಿ ಹಾಗೂ ಡಿಸಿಗೂ ದೂರು ನೀಡುತ್ತೇವೆ. ಈ ಅಸಲಿ-ನಕಲಿ ಆಟದ ಕುರಿತು ಸಮಗ್ರ ತನಿಖೆಯಾಗಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *