ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಗ್ರಾಮದ ಪ್ರಾಥಮಿಕ ಶಾಲೆಯ ಕಾಂಪೌಂಡ್ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿದೆ.
ಬೆಳಗಿನ ಜಾವ ಸುಮಾರು 3 ಗಂಟೆಗೆ ದಾಳಿ ನಡೆಸಿರುವ ಕಾಡಾನೆಗಳು, ಶಾಲೆಯ ಕಾಂಪೌಂಡ್ ಮತ್ತು ಗೇಟ್‍ಗಳನ್ನು ಮುರಿದು ಹಾಕಿವೆ. ಶಾಲೆಯ ಸ್ವಾಗತ ಕಮಾನು ಮತ್ತು ಕಾಂಪೌಂಡ್ ಧ್ವಂಸವಾಗಿದೆ. ಆನೆಗಳ ದಾಳಿಯಿಂದ ಪೋಷಕರಿಗೆ ಜೀವ ಭಯ ಕಾಡುತ್ತಿದ್ದು, ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಕೂಡ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಶಾಲೆಯ ಆಸ್ತಿಗೂ ಹಾನಿಯಾಗಿದ್ದು, ಅರಣ್ಯ ಇಲಾಖೆಯೇ ನಷ್ಟ ಭರಿಸಬೇಕು ಎಂದು ಶಾಲೆಯ ಎಸ್‍ಡಿಎಂಸಿ ಆಡಳಿತ ಮಂಡಳಿ ಆಗ್ರಹಿಸಿದೆ. ಸಂಜೆಯಾಗುತ್ತಲೇ ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳು, ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಭಯದ ವಾತಾವರಣ ನಿರ್ಮಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆನೆಗಳ ಉಪಟಳದಿಂದ ಸಾರ್ವಜನಿಕರ ಓಡಾಟವೂ ಕಷ್ಟಕರವಾಗಿದ್ದು, ಕಾಡಾನೆಗಳಿಂದ ಮುಕ್ತಿ ನೀಡುವಂತೆ ಗೋಣಿಮರೂರು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.