ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದು ಯಾಕೆ – ಸ್ಪಷ್ಟನೆ ನೀಡಿದ ಯಶ್

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಯಶ್ ಫಾರ್ಮ್ ಹೌಸ್ ಜಾಗ ವಿವಾದದ ವಿಚಾರವಾಗಿ ಇಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಜಾಗ ಖರೀದಿಸಿರುವ ಮುಖ್ಯ ಉದ್ದೇಶ ವ್ಯವಸಾಯ ಮಾಡುವುದು. ನನ್ನ ತಾಯಿಯವರು ಹಾಸನ ಜಿಲ್ಲೆಯವರು ಹಾಗಾಗಿ ಅವರಿಗೆ ಹಾಸದಲ್ಲಿಯೇ ಇರಬೇಕೆಂಬ ಆಸೆ ಇದೆ. ಅವರಿಗಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಆ ಸ್ಥಳ ಖರೀದಿಸಿದೆ ಎಂದು ಹೇಳಿದ್ದಾರೆ.

ಯಶ್ ಹೇಳಿದ್ದೇನು?
ನನ್ನಂತಹವರು ಜಾಗ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಆ ಸ್ಥಳಕ್ಕೆ ಸಂಪೂರ್ಣ ಭದ್ರತೆ ವಹಿಸುವುದು ನಮ್ಮ ವೃತ್ತಿಪರ ಅವಶ್ಯಕತೆಯಾಗಿರುತ್ತದೆ. ನಾವು ಅಲ್ಲಿ ಏನೇ ಮಾಡಿದರೂ ನಮಗೆ ಪ್ರೈವೆಸಿ ಬೇಕಾಗುತ್ತದೆ. ಹೀಗಿರುವಾಗ ರಾತ್ರೋರಾತ್ರಿ ಕಾಂಪೌಂಡ್ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಸುತ್ತಲು 20-30 ಜನರಿಗೆ ಸಂಬಂಧಿಸಿದ ಆಸ್ತಿಗಳಿದ್ದು, ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತದೆ. ಆದರೆ ಕಾನೂನಿನ ಪ್ರಕಾರ ಪತ್ರದಲ್ಲಿ ಏನಿರುತ್ತದೆ ಅದನ್ನು ಚರ್ಚಿಸಿ ನಾವು ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

ಮೊದಲು ಆ ಸ್ಥಳದಲ್ಲಿ ರಸ್ತೆ ಇತ್ತು. ಹಾಗಾಗಿ ಈ ಸ್ಥಳ ನಮಗೆ ಓಡಾಡಲು ಸ್ವಲ್ಪ ಅನುಕೂಲಕರವಾಗಿದೆ ಎಂದು ಜನರು ಬಂದು ಕೇಳಿಕೊಂಡರು. ಹೀಗಾಗಿ ಈ ವಿಚಾರವಾಗಿ ಕೂಲಂಕೂಷವಾಗಿ ಮ್ಯಾಪ್‍ನಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿ ರಸ್ತೆ ಇಲ್ಲ ಎಂಬ ವಿಚಾರ ತಿಳಿದು ಬಂದಿದೆ. ನಮ್ಮ ಜಮೀನಿನಲ್ಲಿರುವ ರಸ್ತೆಯೇ ಬೇರೆ, ಸಾರ್ವಜನಿಕ ರಸ್ತೆಯೇ ಬೇರೆ. ಜಮೀನಿನ ಮಧ್ಯೆ ರಸ್ತೆಗೆ ಜಾಗ ಮಾಡಿಕೊಟ್ಟರೆ ಅದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದ್ದರಿಂದ ಕಾಂಪೌಂಡ್ ನಿರ್ಮಿಸುವುದು ಅನಿವಾರ್ಯವಾಯಿತು ಎಂದರು.

ಜಮೀನಿನ ಹಿಂಭಾಗ ಒಂದು ದೇವಾಲಯವಿದ್ದು, ದೇವಾಲಯಕ್ಕೆ ಹೋಗಲು ದಾರಿ ಮಾಡಿಕೊಳ್ಳಬಹುದೆಂದು ಜೆಸಿಬಿ ಬಳಸಿ ನಾವೇ ರಸ್ತೆ ಮಾಡಿಕೊಂಡಿದ್ದೇವೆ. ಅಲ್ಲೊಂದು ಕೃಷಿ ಹೊಂಡದ ರೀತಿಯಲ್ಲಿ ಚಿಕ್ಕ ಕೆರೆ ನಿರ್ಮಿಸಲು ಏನು ಮಾಡಬೇಕೆಂದು ಯೋಜನೆ ನಡೆಸುತ್ತಿದ್ದಾನೆ. ಅಷ್ಟರಲ್ಲಿ ಕಾಂಪೌಂಡ್ ಹಾಕುವ ಕುರಿತಂತೆ ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ಖಂಡಿತ ಯಾವುದೇ ಕಾರಣಕ್ಕೂ ನಮ್ಮಿಂದ ಇನ್ನೊಬ್ಬರಿಗೆ ಅನ್ಯಾಯವಾಗಲೂ ನಾನು ಬಿಡುವುದಿಲ್ಲ. ನಮ್ಮ ಜಮೀನಿನ ಪಕ್ಕದಲ್ಲಿ ರಸ್ತೆ ಮಾಡಿಕೊಟ್ಟರೆ ಜನ ಸುಲಭವಾಗಿ ಓಡಾಡುತ್ತಾರೆ. ಈ ಕುರಿತಂತೆ ನಾನು ಈಗಾಗಲೇ ಶಾಸಕರ ಜೊತೆ ಕೂಡ ಚರ್ಚೆ ನಡೆಸಿದ್ದೇನೆ. ಆದಷ್ಟು ಬೇಗ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ನನಗೆ ಸದ್ಯ ಸಮಯವಿಲ್ಲದ ಕಾರಣ ಇದರ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನನ್ನ ತಂದೆ-ತಾಯಿ ಕಾಂಪೌಂಡ್ ಹಾಕಿಸುವ ಕೆಲಸ ಮಾಡಲು ಮಂದಾಗಿದ್ದರು ಎಂದು ಹೇಳಿದರು.

ಈ ಚಿಕ್ಕ ವಿಷಯವನ್ನು ದೊಡ್ಡ ವಿಚಾರ ಮಾಡಬೇಡಿ. ನಾನು ಪೊಲೀಸ್ ಠಾಣೆಗೆ ಹೋಗಲು ಇಚ್ಛಿಸುವುದಿಲ್ಲ. ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಖಂಡಿತ ನಾನು ಅಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿಸುತ್ತೇನೆ. ಅಲ್ಲಿಯವರೆಗೂ ನನಗೆ ಕೊಂಚ ಕಾಲಾವಕಾಶಬೇಕು. ಎಲ್ಲರೂ ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *