ಕಾಂಗ್ರೆಸ್ ಹಿರಿಯ ಮುಖಂಡ ಮಾಧವ್ ಸಿಂಗ್ ಸೋಲಂಕಿ ಇನ್ನಿಲ್ಲ

Public TV
1 Min Read

ಗಾಂಧಿನಗರ: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮಾಧವ್ ಸಿಂಗ್ ಸೋಲಂಕಿಯವರು ಇಂದು ತಮ್ಮ ಗಾಂಧಿನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ (93) ಮಾಧವ್ ಸಿಂಗ್ ಸೋಲಂಕಿ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಆಡಳಿತಾವಧಿಯಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಧವ್ ಸಿಂಗ್ ಸೋಲಂಕಿ ಅವರು ಅಸಾಧಾರಣ ನಾಯಕರಾಗಿದ್ದರು. ಗುಜರಾತ್ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯಕ್ಕೆ ಅವರು ನೀಡಿದ್ದ ಕೊಡುಗೆ ಮತ್ತು ಅಭಿವೃದ್ಧಿ ಸೇವೆಗಳು ಅಪಾರ. ಇಂದು ಅವರ ನಿಧನ ಬಹಳ ದುಃಖ ತಂದಿದೆ. ಓಂ ಸಾಂತಿ ಎಂದು ಹೇಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಧವ್ ಸಿಂಗ್ ಸೋಲಂಕಿಯವರ ನಿಧನ ವಿಷಯ ಕೇಳಿ ಬೇಸರವಾಗಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಬಲಪಡಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವಲ್ಲಿ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸೋಲಂಕಿಯವರ ಸಾವನ್ನು ಸಹಿಸಿಕೊಳ್ಳಲು ಶಕ್ತಿ ದೇವರು ನೀಡಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಗುಜರಾತ್ ಮಾಜಿ ಮುಖ್ಯಮಂತ್ರಿ, ದೇಶದ ಮಾಜಿ ವಿದೇಶಾಂಗ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಮಾಧವ್ ಸಿಂಗ್ ಸೋಲಂಕಿ ಅವರ ಸಾವು ದುರಂತ. ದೇವರು ಅವರ ಪವಿತ್ರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಜೀವಿತಾವಧಿಯಲ್ಲಿ ಸ್ವಭಾವ ಮತ್ತು ಕಾರ್ಯಗಳು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದು, ಅವರು ಎಂದಿಗೂ ಮರೆಯಾಗುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಚಾವ್ಡಾ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ದಿವಂಗತ ರಾಜಕಾರಣಿಯ ಮಗ ಭಾರತ್ ಸೋಲಂಕಿ ಗುಜರಾತ್‍ನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಕೇಂದ್ರ ಸಚಿವರಾಗಿದ್ದರು. ಮಾಧವ್ ಸಿಂಗ್ ಸೋಲಂಕಿ 1976 ಮತ್ತು 1990ರ ನಡುವೆ ನಾಲ್ಕು ಬಾರಿ ಗುಜರಾತ್ ಸಿಎಂ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *