ಕಾಂಗ್ರೆಸ್ ಬುದ್ಧಿಮಾಂದ್ಯ ಪಕ್ಷವೆಂದು ಅದನ್ನು ಬಿಟ್ಟ ನಂತ್ರ ತಿಳಿಯಿತು: ಖುಷ್ಬೂ

Public TV
2 Min Read

ಚೆನ್ನೈ: ಕಾಂಗ್ರೆಸ್ ಬುದ್ಧಿಮಾಂದ್ಯ ಪಕ್ಷವೆಂದು ಆ ಪಕ್ಷವನ್ನು ತೊರೆದ ನಂತರ ನನಗೆ ಗೊತ್ತಾಯ್ತು ಎಂದು ನಟಿ ಖುಷ್ಬೂ ಸುಂದರ್ ಅವರು ಹೇಳಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ಆರಂಭವಾಗಿದ್ದು, ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ್ದ ನಟಿ ಖುಷ್ಬೂ ಸುಂದರ್ ಸೋಮವಾರ ಬಿಜೆಪಿ ಸೇರಿದ್ದರು. ನಿನ್ನೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ಇಂದು ಚೆನ್ನೈಗೆ ಬಂದು ಮಾಧ್ಯಮಗಳ ಜೊತೆ ಮಾತನಾಡಿರುವ ಖುಷ್ಬೂ, ಕಳೆದ ಆರು ವರ್ಷದಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದೇನೆ. ಪಾರ್ಟಿಗಾಗಿ ನಾನು ಬಹಳ ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಈಗ ಪಾರ್ಟಿ ತ್ಯಜಿಸಿದ ನಂತರ ನಾನು ಇಷ್ಟು ದಿನ ಬುದ್ಧಿಮಾಂದ್ಯ ಪಕ್ಷದಲ್ಲಿ ಇದ್ದೆ ಎಂದು ನನಗೆ ಆರ್ಥವಾಗಿದೆ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಖುಷ್ಬೂ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್ ಪಕ್ಷವನ್ನು ಬುದ್ಧಿಮಾಂದ್ಯ ಪಕ್ಷವೆಂದ ಖುಷ್ಬೂ ವಿರುದ್ಧ ಹಲವಾರು ಕೈ ನಾಯಕರು ಕಿಡಿಕಾರಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಕೆ.ಎಸ್ ಅಲಗಿರಿ, ಖುಷ್ಬೂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದಕ್ಕೆ ನಮಗೆ ಯಾವುದೇ ನಷ್ಟವಿಲ್ಲ. ಬಿಜೆಪಿಯವರು ಆಹ್ವಾನ ನೀಡದಿದ್ದರು ಕೂಡ ಅವರೇ ಹೋಗಿ ಪಕ್ಷ ಸೇರಿದ್ದಾರೆ. ಇದರಿಂದ ನಮಗೆ ಯಾವುದೇ ನಷ್ಟವಿಲ್ಲ. ನಾವು ಆಕೆಯ ರಾಜೀನಾಮೆಯನ್ನು ಅಂಗೀಕರಿಸಿದ್ದೇವೆ ಎಂದು ಹೇಳಿದ್ದಾರೆ.

ಖುಷ್ಬೂ ಸುಂದರ್ 2014ರಲ್ಲಿ ಡಿಎಂಕೆ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ತದನಂತರ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಪಕ್ಷದ ವಕ್ತಾರೆಯಾಗಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜಕೀಯ ಅಂಗಳದಲ್ಲಿ ಚಿರಪರಿಚಿತರಾಗಿದ್ದರು. ಕನ್ನಡ, ಹಿಂದಿ, ತಮಿಳು ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖುಷ್ಬೂ ದಕ್ಷಿಣ ಭಾರತದಲ್ಲಿ ಚಿರಪರಿಚಿತರು.

ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ವಿರೋಧಿಸಿದ್ದರೆ ಖುಷ್ಬು ಸುಂದರ್ ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದರು. ನೂತನ ಶಿಕ್ಷಣ ಕುರಿತಾಗಿ ಪ್ರಧಾನಿ ಮೋದಿಯನ್ನು ಪ್ರಶಂಸಿಸಿ ಎನ್‍ಇಪಿ ಕುರಿತಾಗಿ ಪಕ್ಷದ ವಿರೋಧಿ ನಿಲುವು ಅನುಸರಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರಲ್ಲಿ ಕ್ಷಮೆ ಕೋರಿದ್ದರು. ಜೊತೆಗೆ ರಾಜೀನಾಮೆ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಉನ್ನತ ಮಟ್ಟದ ವಿಚಾರಗಳು ಕೆಲಮಟ್ಟದ ಕಾರ್ಯಕರ್ತರಿಕೆ ತಲುಪುವುದಿಲ್ಲ ಎಂದು ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *