ಕಾಂಗ್ರೆಸ್ ಖಾಲಿ ಡಬ್ಬ ಹೆಚ್ಚು ಸಪ್ಪಳ ಮಾಡುತ್ತದೆ: ಸಿಟಿ ರವಿ

Public TV
2 Min Read

– ಸಾರಿಗೆ ಸಿಬ್ಬಂದಿ ರಾಜಕೀಯ ದಾಳವಾಗಬಾರದು
– ಪಕ್ಷದಿಂದ ಹೊರ ಹೋದವರು ಅಸ್ತಿತ್ವ ಕಳೆದುಕೊಂಡಿದ್ದಾರೆ

ಕಲಬುರಗಿ: ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಆಗ ಕಾಂಗ್ರೆಸ್ ಖಾಲಿ ಡಬ್ಬ ಎಂದು ಸಾಬೀತು ಆಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಲಿ ಡಬ್ಬ ಹೆಚ್ಚು ಸಪ್ಪಳ ಮಾಡುತ್ತದೆ. ಹೀಗಾಗಿ ಕಾಂಗ್ರೆಸ್ ಡಬ್ಬ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಅಂತ ಸಿದ್ದರಾಮಯ್ಯನವರು ಹೇಳಿದ್ದರು. ಈ ಉಪ ಚುನಾವಣೆ ನಂತರ ಕಾಂಗ್ರೆಸ್ ಖಾಲಿ ಡಬ್ಬ ಅನ್ನೋದು ಸಾಬೀತಾಗುತ್ತದೆ. ಬೇಲಿ ಮೇಲೆ ಕೂತವರು ಬೇಲಿ ಹಾರಲಿಕ್ಕೆ ಸಿದ್ಧರಾಗಿರುತ್ತಾರೆ.ಇನ್ನು ಬಾಳ ಜನ ಬಿಜೆಪಿ ಸೇರಲು ಸಂಪರ್ಕದಲ್ಲಿದ್ದಾರೆ. ನಾವು ಈ ಹಿಂದೆ ಏನು ಹೇಳಿದ್ದೆವೋ ಅದು ನಡೆಯುತ್ತದೆ ಎಂದು ಕಾಂಗ್ರೆಸ್ ವಿರುದ್ಧವಾಗಿ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಏನು ಹೇಳ್ತಾರೋ ಅದರ ವಿರುದ್ಧವಾಗಿ ನಡೆಯುತ್ತದೆ. ನಮ್ಮ ಪಕ್ಷದ ಮೂಲ ಸಿದ್ಧಾಂತದ ಜೊತೆ ಯಾವುದೇ ರಾಜಿ ಇಲ್ಲಾ. ಸಮುದ್ರದ ಅಲೆ ಬರುತ್ತದೆ. ಹಾಗಂತ ಸಮುದ್ರ ಖಾಲಿಯಾಗಲ್ಲಾ. ಯಾರು ಏನೇ ಮಾತನಾಡಿದ್ರು ಮರಳಿ ಸಮುದ್ರಕ್ಕೆ ಬರಲೇಬೇಕು. ಸಮುದ್ರವನ್ನು ಮೀರಿ ಅಲೆ ಹೋದ್ರೆ ಸಮುದ್ರಕ್ಕೆ ಯಾವುದೇ ಹಾನಿಯಾಗೋದಿಲ್ಲಾ. ಹಾಗೇ ಹೋದವರು ಅಸ್ತಿತ್ವ ಕಳೆದುಕೊಂಡ ಮರೆಯಾಗಿದ್ದಾರೆ ಎಂದಿದ್ದಾರೆ.

ಯತ್ನಾಳ ಸೇರಿದಂತೆ ಕೆಲವರು ಪಕ್ಷದ ವಿರುದ್ಧ ಹೇಳಿಕೆ ವಿಚಾರವಾಗಿ ಅಶಿಸ್ತಿನ ವಿರುದ್ಧ ಕ್ರಮ ಕೈಗೊಳ್ಳಲು ಕಮಿಟಿ ಇದೆ. ರೋಗಿ ಡಾಕ್ಟರ್ ಮುಂದೆ ಬಂದಾಗ ಮೊದಲೇ ಪೇಶೆಂಟ್ ಉಳಿಸೋ ಉದ್ದೇಶ ಇರುತ್ತದೆ. ಹೀಗಾಗಿ ಮೊದಲು ಬಿಪಿ ಶುಗರ್ ಚೆಕ್ ಮಾಡ್ತಾರೆ. ಯಾವುದೇ ಆಗದೇ ಇದ್ದಾಗ ವೈದ್ಯರು ಆಪರೇಶನ್ ಮಾಡ್ತಾರೆ. ಶಿಸ್ತು ಸಮಿತಿ ಯತ್ನಾಳ ಅವರ ಬಗ್ಗೆ ನಿರ್ಧಾರ ಮಾಡುತ್ತಾರೆ. ಯತ್ನಾಳರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳಲ್ಲಾ. ಕೆಲ ಸಂಗತಿಗಳನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ಕೆಲ ವಿಷಯಗಳನ್ನು ಪಾರ್ಟಿ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಾನು ಮೇಲ್ಪಂಕ್ತಿಯನ್ನು ಹಾಕಬೇಕು ಅಂತ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಸಂವಿಧಾನದಲ್ಲಿ ಇಷ್ಟೇ ವರ್ಷಕ್ಕೆ ರಾಜಕೀಯ ಮಾಡಬಾರದು ಅಂತ ಇಲ್ಲಾ. ಆದರೆ ನಮ್ಮಷ್ಟಕ್ಕೆ ನಾವೇ ಮೇಲ್ಪಂಕ್ತಿಯನ್ನು ಹಾಕಬೇಕು. ಸಾರಿಗೆ ನೌಕರರ ಮುಷ್ಕರ ಸಂಬಂಧ ಪಟ್ಟಂತೆ ಸಾರಿಗೆ ಸಚಿವರ ಜೊತೆ ಮಾತನಾಡಿದ್ದೇನೆ. ಮೊದಲೇ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಸಿಬ್ಬಂದಿ ಯಾರದೇ ರಾಜಕೀಯ ದಾಳವಾಗಬಾರದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *